ಹೆಣ್ಣು, ಆಹಾರ, ಮತ್ತು ಅಡಿಗೆ
Volume 2 | Issue 8 [December 2022]

ಹೆಣ್ಣು, ಆಹಾರ, ಮತ್ತು ಅಡಿಗೆ <br>Volume 2 | Issue 8 [December 2022]

ಹೆಣ್ಣು, ಆಹಾರ, ಮತ್ತು ಅಡಿಗೆ

ಶಶಿ ದೇಶಪಾಂಡೆ

Volume 2 | Issue 8 [December 2022]

ಅನು: ವಿಘ್ನೇಶ ಹಂಪಾಪುರ

‘ಆಹಾರ-ಅಡಿಗೆ ನನ್ನ ಜೀವನದ ಅತ್ಯಂತ ಮಹತ್ವದ ಕಳವಳಗಳಲ್ಲಿ ಒಂದು.’

ಮಾರ್ಗರೆಟ್ ದ್ರಾಬಲ್ (ಲೋವ್ಸ್ ಅಂಡ್ ವಿಶಸ್: ರೈಟರ್ಸ್ ರೈಟಿಂಗ್ ಆನ್ ಫುಡ್, ವಿರಾಗೋ 1992)

ಹತ್ತಾರು ವರ್ಷಗಳ ಹಿಂದೆ ವಿರಾಗೋ ಪ್ರಕಾಶಕರು ಅಡಿಗೆಯ ಕುರಿತ ಸಂಕಲನವೊಂದಕ್ಕೆ ಬರೆಯಲು ನನ್ನನ್ನು ಆಹ್ವಾನಿಸಿದರು. ಬರಹಗಾರರ ಪಟ್ಟಿಯಲ್ಲಿ ವರ್ಜಿನಿಯಾ ವುಲ್ಫ್, ಡೋರಿಸ್ ಲೆಸ್ಸಿಂಗ್, ಮಾರ್ಗರೇಟ್ ಆಟ್ವುಡ್, ಮಾರ್ಗರೇಟ್ ಡ್ರಾಬಲ್ ಮುಂತಾದವರು ಎಲ್ಲರೂ ಮಹಿಳೆಯರೇ ಆಗಿದ್ದರು. ಪುಸ್ತಕ ಕೈ ಸೇರಿದೊಡನೆ ಇಂತಹ ವಿಶಿಷ್ಟರಾದ ಬರಹಗಾರರೊಡನೆ ನನ್ನ ಹೆಸರೂ ಸೇರಿದೆ ಎಂಬ ಸಂತಸವೇ ನನ್ನ ಮೊದಲ ಪ್ರತಿಕ್ರಿಯೆಯಾಗಿತ್ತು. ನಾನಾಗ ಇನ್ನೂ ಹೊಸ್ತಿಲು ದಾಟಿ ಬರಹದ ವೃತ್ತಿಯನ್ನು ಶ್ರದಾಪೂರ್ವಕವಾಗಿ ಪ್ರವೇಶಿಸುತ್ತಿದ್ದೆ. ನಿಜವಾಗಿ ಹೇಳುವುದಾದರೆ, ನನಗೆ ಆಹ್ವಾನ ಬಂದೊಡನೆ ಏನು ಬರೆಯಲಿ ಎಂಬ ಸಂದಿಗ್ಧದಲ್ಲಿದೆ. ನನಗೆಂದೂ ಆಹಾರ-ಅಡಿಗೆಯ ಬಗ್ಗೆ ಆಸಕ್ತಿ ಇರಲಿಲ್ಲ. ಅಡಿಗೆಯಲ್ಲಿ ನಿಪುಣಳಾದ ನನ್ನಮ್ಮ ಎಡಬಿಡಂಗಿ ಎಳೆಯರನ್ನು ಅಡಿಗೆಮನೆಗೆ ಸೇರಿಸಿದ್ದಿಲ್ಲ. ಮಸಾಲೆಯನ್ನು ಹುರಿ ಅದೂ ಇದೂ ಹೀಗೆ ಕೆಲಸ ಕೊಟ್ಟಿದ್ದರೂ ಅವೆಲ್ಲವೂ ಮುಖ್ಯ ಅಡಿಗೆಗೆ ಗೌಣವಾದ ಕೆಲಸಗಳು. ಇದರ ಪರಿಣಾಮವೇನಾಯಿತೆಂದರೆ ಮದುವೆಯಾಗಿ ಹೋದಮೇಲೆ ಅಂದಿನಿಂದ ನಮ್ಮ ಎರಡರ ಕುಟುಂಬಕ್ಕೆ ನಾನೇ ಅಡಿಗೆ ಮಾಡಬೇಕೆಂಬುದು ನನಗೆ ಆಘಾತವಾಗಿ ಬಂತು. ಅಂದರೆ, ನಾವು ಉಣ್ಣಬೇಕೇ, ನಾನು ತಯಾರಿಸಬೇಕು. ಬೆಳಿಗ್ಗೆ ಎದ್ದ ಕೂಡಲೆ ಅಡಿಗೆ ಮಾಡಬೇಕಲ್ಲ ಎಂಬ ಆತಂಕಮಯ ನಿರೀಕ್ಷೆ ನನ್ನ ಮುಂದೆ ಮಬ್ಬಾಗಿ ಮೂಡುತ್ತಿತ್ತು. ಶುರು ಮಾಡಿದಾಗ ದಿಗಲು, ಮುಗಿಸಿದಾಗ ಗೋಜಲು: ಹೇಗೋ ಏನೋ ಮಾಡಿ ಇಡುತ್ತಿದೆ.

ಇತರ ಹೆಂಗಸರು ಹೇಗೆ ನಿಭಾಯಿಸುತ್ತಿದ್ದರೋ ಏನೋ? ನಾ ಕಂಡ ನನ್ನ ಕುಟುಂಬದ ಹೆಂಗಸರು – ತಾಯಂದಿರು, ದೊಡ್ಡಮ್ಮ-ಚಿಕ್ಕಮ್ಮಂದಿರು, ಮತ್ತಿತರರು – ಎಲ್ಲರೂ ಅಡಿಗೆಯಲ್ಲಿ ಎತ್ತಿದ ಕೈ ಎಂಬ ಹೆಮ್ಮೆಯ ಬಿರಿದು ಹೊತ್ತವರೇ. ಅದು ಸಾಲದೆಂಬಂತೆ ನಾನು ಮದುವೆಯಾದ ಮನೆಯಲ್ಲಿನ ಹೆಂಗಸರು ಅತ್ಯುತ್ತಮ ಅಡಿಗೆ ಮಾಡುವವರಷ್ಟೇ ಅಲ್ಲ, ಅದರಲ್ಲಿ ಎಷ್ಟು ಸಮರ್ಥರೆಂದರೆ ಅಕಸ್ಮಾತಾಗಿ ಅತಿಥಿಗಳು ಮನೆಗೆ ಬಂದರೆ ನಡುರಾತ್ರಿಯಲ್ಲಿಯೂ ತತ್ ಕ್ಷಣವೇ ಔತಣವನ್ನು ತಯಾರಿಸುತ್ತಿದ್ದರು. ಹಾಗೆ ಹೇಳುತ್ತಿದ್ದರಂತೂ ಹೌದು. ನಾ ಭೇಟಿಯಾದ ನವವಿವಾಹಿತ ವಧುವರಂತೂ ತಮ್ಮ ‘ಇವರಿಗೆ’ ಬೇರೆ ಬೇರೆ ತಿಂಡಿ-ತಿನಿಸುಗಳನ್ನು ಮಾಡಿ ಬಡಿಸಲು ಕಾತುರರಾಗಿದ್ದರೆ, ಇಲ್ಲಿ ನಾನು…

ಈ ವಿಷಯದಲ್ಲಿ ನಾನು ಸೋತವಳು ಎಂಬುದರಲ್ಲಿ ಸಂಶಯವೇ ಇರಲಿಲ್ಲ. ಮತ್ತೆ ನೆನಪಿರಲಿ, ನಾನು ಮದುವೆಯಾದ ಕಾಲದಲ್ಲಿ ‘ಫೆಮಿನಿಸ್ಟ್’ ಪದವು ಸಾಮಾನ್ಯ ಚಾಲ್ತಿಯಲ್ಲಿರಲಿಲ್ಲ. ಪುರುಷಪ್ರಾಧಾನ್ಯತೆಯದ್ದೇ ದರ್ಬಾರ್. ದುರಭಿಮಾನಕ್ಕೆ ಆಕ್ಷೇಪಣೆಯೇ ಇಲ್ಲದ ಕಾಲವದು. ಹೆಣ್ಣಿನ ಪಾತ್ರ ಮನೆಯಲ್ಲಿದ್ದು, ಮಕ್ಕಳನ್ನು ಹೆತ್ತು, ಅಡಿಗೆ ಮಾಡಿಕೊಂಡು ಮಕ್ಕಳನ್ನೂ ಮನೆಯನ್ನೂ ಸಂಬಾಳಿಸುವುದು ಎನ್ನುವುದು ನಿರಾಕರಿಸಲಾಗದ ಸತ್ಯವಾಗಿಹೋಗಿತ್ತು. ಹೆಣ್ಣುಮಕ್ಕಳಿಗೆ  ಅಡಿಗೆ ಕೌಶಲ್ಯವು ಸ್ವಾಭಾವಿಕವಾಗಿ ದಕ್ಕಿದ್ದು ಅನ್ನುವುದು ಇದರ ಹಿಂದಿನ ಪೂರ್ವಕಲ್ಪನೆ. ಹಾಗಿದ್ದರೆ ನನಗೇಕೆ ಅಡಿಗೆ ಕಷ್ಟ, ಅದರ ಬಗ್ಗೆ ನಿರಾಸಕ್ತಿ? ಮತ್ತೆ ನನ್ನ ‘ಇವರಿಗೆ’ ಯಾಕೆ ಅಡಿಗೆಯ ಬಗ್ಗೆ ಅಷ್ಟೊಂದು ಆಸಕ್ತಿ, ಅಡಿಗೆ ಮಾಡುವ ಬಗ್ಗೆ ಎಷ್ಟೊಂದು ಉತ್ಸಾಹ? (ಓ, ಆಗ ಈಗ ಮಾತ್ರ ಅಷ್ಟೇ, ದಿನನಿತ್ಯದ ಹೆಣಗಾಟದದ ಬಗ್ಗೆ ಅಲ್ಲ.) ಅಡಿಗೆ ಒಂದು ಕಲಾಪ್ರಕಾರವಾಗಿದ್ದರೆ — ಮತ್ತೆ ಹಾಗೆ ನಾವು ಪರಿಗಣಿಸುತ್ತೇವೆ — ಅದು ‘ಸ್ತ್ರೀ’ ಎಂಬ ಲಿಂಗವನ್ನು ಹೊತ್ತ ವ್ಯಕ್ತಿಯನ್ನೇ ಹುಡುಕಿ ಹೋಗುತ್ತಿರಲಿಲ್ಲ. ನಿಜ, ಅಡಿಗೆ ಮಾಡುವುದರಲ್ಲಿ ತೊಡಗಿ ಸಂತೋಷ ಪಡುವ ಗಂಡಸರಿದ್ದಾರೆ. ಆದರೆ ಅದನ್ನೆಂದೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಹಾಗೆ ಗಂಭೀರವಾಗಿದ್ದವರು ಪ್ರೊಫೆಶನಲ್ಸ್: ಕುಕ್ಸ್ ಅಲ್ಲ, ಶೆಫ್ಸ್. ಹೊಳಪಿನ ಬಿಳಿ ಟೋಪ್ಪಿ ಧರಿಸಿ, ಸಮೃದ್ಧವಾಗಿ ಸಂಪಾದಿಸುವ, ಕೆಲವೊಮ್ಮೆ ಸೆಲೆಬ್ರಿಳಿಗಳೂ ಆಗುವ ಶೆಪ್ಫುಗಳು. ಗಂಡಸು ಯಾವುದೇ ಚಟುವಟಿಕೆಯಲ್ಲಿ ಪಾಲುಗೊಳ್ಳಲಿ, ಅದನ್ನು ಉಚ್ಛ ಸ್ಥಾನಕ್ಕೆ ಏರಿಸಲಾಗುತ್ತದೆ ಎಂದು ಅರ್ಥ ಮಾಡಿಕೊಳ್ಳಲ್ಲು ಪ್ರಾರಂಭಿಸಿದ್ದೆ. ಗಂಡಸರ ಅಡಿಗೆ ಕಲೆ, ಹೆಣ್ಣು ಮನೆಯಲ್ಲಿ ತಯಾರಿಸುವ ಅಡಿಗೆ ಮಾತ್ರ ಲಘುವಾದ ವಿಚಾರ. ಅನಾದಿ ಕಾಲದಿಂದಲೂ ಹೆಂಗಸರು ಮನೆಯಲ್ಲಿ ಅಡಿಗೆ ಮಾಡಿ ಎಲ್ಲರನ್ನು ಪೋಷಿಸುತ್ತಾ ಬಂದಿದ್ದಾರೆ ಎಂಬ ದಿಗ್ಭ್ರಮೆಗೊಳಿಸುವ ಸಂಗತಿಯ ಅರಿವಿದ್ದರೂ ಈ ಶ್ರಮವನ್ನು ಕೊಂಡಾಡುವರು ಯಾರೂ ಇಲ್ಲ. ಪ್ರಶಂಸೆ ಇರಲಿ, ಗೌರವವೂ ಕಷ್ಟವೇ. “ನಾ ಏನೂ ಹೇಳಿಲ್ಲಂದ್ರೆ ಅಡಿಗೆ ರುಚಿಯಾಗಿತ್ತು ಅಂತರ್ಥ” — ಎಷ್ಟು ಹೆಂಗಸರು ಈ ಮಾತನ್ನು ಕೇಳಿಲ್ಲ!

ಅಷ್ಟು ಸಾಲದು ಎಂಬಂತೆ ಆದರ್ಶ ಮಹಿಳೆ ಎಂಬ ಪರಿಕಲ್ಪನೆಗೆ ಒಳ್ಳೆಯ ಅಡುಗೆ ಮಾಡುತ್ತಿರುವ ಹೆಣ್ಣಿನ ಚಿತ್ರ ಅಂಟಿದೆ. ತನ್ನ ಕುಟುಂಬಕ್ಕೆ ಉಣಬಡಿಸದಿದ್ದರೆ ಅಥವಾ ಆ ಕಾರ್ಯವನ್ನು ತಾನು ಇಷ್ಟ ಪಡದಿದ್ದರೆ ತಾನು ಉತ್ತಮ ಮಹಿಳೆಯೇ? ಅವಶ್ಯ ಬಿದ್ದಲ್ಲಿ ಈ ಒಳ್ಳೆಯ ಹೆಣ್ಣು ತನಗೆ ತಾನೇ ಎಲ್ಲವನ್ನು ನಿರಾಕರಿಸಿಕೊಳ್ಳುವವಳು. ಹಿಂದೆಲ್ಲಾ, ಗಂಡಸರಿಗೆ ಮಕ್ಕಳಿಗೆ ಬಡಿಸಿದ ನಂತರ ಮಿಕ್ಕಿದ್ದನ್ನು ಕೊನೆಗೆ ತಿನ್ನುವವರು ಹೆಂಗಸರು. ನನ್ನ ತವರಲ್ಲಿನ ಎಲ್ಲರೂ ಒಟ್ಟಿಗೆ ತಿಂದರೂ ನನ್ನಮ್ಮ ಅಡಿಗೆ ಕಡಿಮೆ ಬಿದ್ದಾಗ ನನಗೆ ಸಾಕು, ಹೊಟ್ಟೆ ತುಂಬಿದೆ ಎಂದೆಲ್ಲಾ ಪ್ರಮಾಣಿಸುತ್ತಾ  ಬಹುಶಃ ತನ್ನ ಹಸಿವಿಗೆ ವಂಚನೆ ಮಾಡಿಕೊಂಡಳು ಅನಿಸುತ್ತದೆ. ಸೀದ ಚಪಾತಿ ಅವಳದ್ದು, ಮುರಿದ ಜೋಳದ ರೊಟ್ಟಿ ಅವಳದ್ದು, ಸೀಳಿದ ಲೋಟ ಅವಳದ್ದು, ತಗ್ಗಿದ ಚಿಕ್ಕದಾದ ತಟ್ಟೆ ಅವಳದ್ದು. ನಾನಂದೇ  ನಿಶ್ಚಯಿಸಿದ್ದೆ: ಈ ಜಗತ್ತು ನನ್ನ ಅಗತ್ಯಗಳನ್ನು ನಿರ್ಲಕ್ಷಿಸುವ ಹಾಗೆ ನಾನು ಬಿಡುವುದಿಲ್ಲ ಎಂದು. ನನ್ನನ್ನು ನಾನು ಗೌರವಿಸಿಕೊಂಡರೆ ಮಾತ್ರ ಜಗತ್ತು ನನ್ನನ್ನು ಗೌರವಿಸುತ್ತದೆ. ‘ಹೊಟ್ಟೆ ಬಾಕ ಹೆಣ್ಣಿನಿಂದ ಯಾವ ಸದ್ಗುಣವನ್ನು ನಿರೀಕ್ಷಿಸಬೇಡಿ’ ಎಂಬ ಡಾಕ್ಟರ್ ಜಾನ್ಸನಿನ ಮಾತಿನಲ್ಲಿ ಎಂತಹ ತಪ್ಪೆಣಿಕೆ, ಲಿಂಗಭೇದ, ಸ್ತ್ರೀದ್ವೇಷ, ಬೂಟಾಟಿಕೆ: ತಾನೇ ಹೊಟ್ಟೆಬಾಕನಾದ ಜಾನ್ಸನಿನದ್ದು ಒಳಗೊಂದು ನಡವಳಿಕೆ ಹೊರಗೊಂದು ಮಾತು. ನನ್ನ ಗೊಂದಲಿನ ಗೋಜಲಿನಲ್ಲಿ ಒಂದು ಸಂಗತಿ ಮಾತ್ರ ಸ್ಪಷ್ಟವಾಗಿತ್ತು: ಅಡಿಗೆ-ಆಹಾರ ನನ್ನನ್ನು ಪಟ್ಟುಬಿಡದಂತೆ ಮಹಿಳಾವಾದದ ಸ್ವಾಗತಮಯ ಬಾಹುಗಳತ್ತ ಒಯ್ಯುತ್ತಿದ್ದವು.

ಆಮೇಲೆ ತಾಯಿತನ ಬಂತು; ನನ್ನ ಸಿದ್ಧಾಂತಗಳೆಲ್ಲ ಹಾರಿ ಹೋದವು. ನನ್ನ ಮಕ್ಕಳ ಇಷ್ಟ-ಕಷ್ಟಗಳ ಜೊತೆ ಜೊತೆ ಅವರಿಗೆ ಬೇಕಾದ್ದನ್ನು ಮಾಡಲು ಕಲಿತೆ. ಚಕ್ಕಲಿಗಳು, ಫ್ರೆಂಚ್ ಟೋಸ್ಟ್, ಬಟಾಟ ವಡೆ, ಸಾಬುದಾನ ವಡೆ, ಟೋಸ್ಟ್ ಸ್ಯಾಂಡ್ವಿಚ್, ಮೋದಕ, ಉಬ್ಬುವ ಆಮ್ಲೆಟ್, ಹೀಗೆ. ಅವರು ಬೆಳೆಯುತ್ತಾ ವಿಷಯ ಬದಲಾಯಿತು: ಮನೆಯ ಡಬ್ಬಿಗಿಂತ ಸ್ಕೂಲ್ ಕ್ಯಾಂಟೀನ್ ಅವರಿಗೆ ಹೆಚ್ಚು ಹಿಡಿಸಿತು.

ಅಡಿಗೆಯ ಕುರಿತು ನಾನು ಓದಿದ ಅರ್ಥಪೂರ್ಣ ಮಾತುಗಳಲ್ಲಿ ಒಂದು ಮುನ್ನೂರು ವರ್ಷಗಳ ಹಿಂದೆ ಒಬ್ಬ ಕತೆಗಾರ್ತಿ — ಮಹಿಳೆ — ಹೇಳಿದ್ದು. ಇದು ಜೇನ್ ಆಸ್ಟೆನ್ (ಈ ಹೆಸರು ಬರೆಯುತ್ತಲೇ ನಾನು ಕಿವಿ ಮುಟ್ಟಿಕೊಳ್ಳುತ್ತಿದ್ದೇನೆ; ಸಂಗೀತಗಾರರು ಗುರುಗಳ ಬಗ್ಗೆ ಮಾತನಾಡಬೇಕಾದರೆ ಹೀಗೆ ಮಾಡುವುದಾದರೆ ನಾನೇಕೆ ಮಾಡಬಾರದು?) ತನ್ನ ಅಕ್ಕ ಕಸಾಂಡ್ರಾಗೆ ಪತ್ರದಲ್ಲಿ ಬರೆದಿದ್ದು: ‘ನನ್ನ ಹಸಿವಿಗೆ ಬೇಕಾದನ್ನು ಒದಗಿಸಿಕೊಳ್ಳಲು ನಾನು ಯಾವಾಗಲೂ ಕಾಳಜಿ ವಹಿಸುತ್ತೇನೆ. ಮನೆಯನ್ನು ನಿರ್ವಹಿಸುವುದರಲ್ಲಿ ಮುಖ್ಯ ಗುಣವೇ ಇದು.’ ಇಲ್ಲಿ ನಿರಾಕರಣೆಯ ಸುಳಿವೂ ಇಲ್ಲ.

ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ ತಾನು ಇಟಲಿಯಲ್ಲಿದ್ದಾಗ ಬರೆದ ಈ ಮಾತಿನ ಬಗ್ಗೆ ಮಾತ್ರ ನನಗೆ ಬಹಳ ಈರ್ಶ್ಯೆ: ‘ನಮಗೆ ಟ್ರಾಟ್ಟೋರಿಯಾದಿಂದಲೇ ಊಟ, ಅಗ್ಗದ ಚಿಯಾಂಟಿ ಬೇರೆ. ಇಲ್ಲಿ ಅಲೆ ಇಲ್ಲ, ಒಲೆ ಇಲ್ಲ.’

ಅಲೆ ಇಲ್ಲ, ಒಲೆ ಇಲ್ಲ: ಸ್ವರ್ಗದ ಮಾತಿದು. ಆದರೆ ಎಲಿಜಬೆತ್ ಬ್ರೌನಿಂಗ ಕವಯಿತ್ರಿ. ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ ತನ್ನ ಗಂಡನಿಂದ ಪ್ರೀತಿ-ಪಾಲನೆ ಪಡೆದವಳು. ಬೇರೆ ಲೇಖಕಿಯರು ತಮ್ಮ ಬರವಣಿಗೆಯನ್ನು ಹಾಗು ಮನೆ ಮತ್ತು ಮಕ್ಕಳು ನೋಡಿಕೊಳ್ಳುವ ಕೆಲಸಗಳನ್ನು ಜತೆ ಜತೆ ನಿಭಾಯಿಸಬೇಕಾಗುತ್ತದೆ. ಮತ್ತಿದರೊಡನೆ ಒಂದು ವೃತ್ತಿ ಕೆಲಸ ಕೂಡ ಇರಬಹುದು.

ವಿರಾಗೋ ಸಂಕಲನದ ತನ್ನ ಪ್ರಬಂಧದಲ್ಲಿ ಬೆನಾಯಿಟ್ ಗ್ರೌಲ್ಟ್ ಮಹಿಳಾವಾದದ ವಚನಗಳಿಗಿಂತಲೂ ಹೆಂಗಸರನ್ನು ಅಡಿಗೆಯಿಂದ ದೂರ ಮಾಡಿದ ಒಂದು ನುಡಿಗಟ್ಟಿನ ಬಗ್ಗೆ ಬರೆಯುತ್ತಾರೆ. ಅದೇ ‘ರಾತ್ರಿಗೆ ಊಟಕ್ಕೆ ಏನು?’: ಕೊನೆಯೇ ಇಲ್ಲದ ಅಡಿಗೆಯ ಕೆಲಸದ ನೀರಸತೆಯನ್ನು, ಪ್ರತಿನಿತ್ಯದ ಹೆಂಗಸರ ಪುನರಾವರ್ತನೆಯನ್ನು ಅಚ್ಚುಕಟ್ಟಾಗಿ ಈ ಮಾತು ಪ್ರತಿನಿಧಿಸುತ್ತದೆ. ಅಡಿಗೆಯ ಅವಿರತತೆಯೇ ನನಗೆ ಬೇಸರದ ಸಂಗತಿ. ನನ್ನ ಕಾದಂಬರಿ ದಟ್ ಲಾಂಗ್ ಸೈಲೆನ್ಸ್ ಇಲ್ಲಿಯೇ ಶುರುವಾಗಿದ್ದು. ತನ್ನ ಹಳೆಯ ಡೈರಿಗಳ ಓದಿನಲ್ಲಿ ಜಯಳಿಗೆ ಸಿಗುವ ಹೆಂಗಸಿನ ಜೀವನವೆಲ್ಲ ತಾನು ತಿಂಡಿಗೇನು ಮಾಡಬೇಕು ಊಟಕ್ಕೇನು ಮಾಡಬೇಕು ಎಂಬ ಪ್ರಶ್ನೆಯಿಂದಲೇ ನಿರ್ಮಿತವಾಗಿರುತ್ತದೆ.

ಹಾಗಾಗಿಯೇ ಹೆಂಗಸರು ಅಹಂಕಾರದ ದೀರ್ಘ ತರಬೇತಿ ಪಡೆಯಬೇಕೆಂದು ಗ್ರೌಲ್ಟ್ ಬರೆಯುತ್ತಾರೆ. ಶತಮಾನಗಳಿಂದ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ನಾಣ್ನುಡಿಯನ್ನು ಪ್ರತಿಬಿಂಬಿಸುತ್ತಾ ಬಂದಿರುವ ಹೆಂಗಸರಿಗೆ ಈ ತರಬೇತಿ ಅತಿದೀರ್ಘವಾಗಬೇಕೇ ಸರಿ.

ಜಾಯ್ಸ್ ಕ್ಯಾರೋಲ್ ಓಟ್ಸ್ ಅವರ ಅಮೇರಿಕನ್ ಅಪಟೈಟ್ ಕಾದಂಬರಿಯಲ್ಲಿ ಅಡಿಗೆಯಲ್ಲಿ ಚೆನ್ನಾಗಿಯೇ ನುರಿತ, ಆಸಕಿಯುಳ್ಳ ಗ್ಲಿನಿಸ್ ಅಡಿಗೆಯ ಬಗ್ಗೆ ಬರೆದು ಖ್ಯಾತಿ ಪಡೆಯುತ್ತಿದ್ದರೂ ಕೂಡ ತನ್ನನ್ನು ತಾನು ಹವ್ಯಾಸಿ ಅಷ್ಟೇ ಎಂದು ಕರೆದುಕೊಳ್ಳುತ್ತಾಳೆ. ಕುಟುಂಬದ ನಿಜವಾದ ಪ್ರೊಫೆಷನಲ್ ಅವಳ ಗಂಡ: ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಹಿರಿಯ ಸದಸ್ಯ. ಆದರೂ ನಿನ್ನದು ಬರೇ ಅಡಿಗೆ-ಊಟ ಎಂದು ಅವನು ತನ್ನ ಜಗತ್ತನ್ನು ಅವಳದ್ದಕ್ಕಿಂತ ಮಿಗಿಲಾಗಿ ಭಾವಿಸುತ್ತಾನಲ್ಲ ಎಂಬ ಹುಣ್ಣು ಅವಳ ಹೃದಯದಲ್ಲಿರುತ್ತದೆ.

ಬರೇ ಊಟ. ಹೌದು, ಹೆಂಗಸಿನ ಜೊತೆ ಕೊಂಡಿ ಹಾಕಿಸಿಕೊಂಡಿರುವ ಈ ಅಡಿಗೆಯನ್ನು ಎಂದೂ ಕ್ಷುಲ್ಲಕವೆಂದೇ ಭಾವಿಸುತ್ತೇವೆ. ಈ ಕ್ಷುಲ್ಲಕ ಸಾಮ್ರಾಜ್ಯಕ್ಕೆ ಈಕೆ ಕಾಲೇ ಇಡಲಿಲ್ಲವೇನೋ ಎಂದು ನಾವು ಭಾವಿಸುವ ವರ್ಜಿನಿಯಾ ವುಲ್ಫ್ (ಇಲ್ಲಿ ನಾನು ಮತ್ತೆ ಕಿವಿ ಮುಟ್ಟಿಕೊಳ್ಳುತ್ತಿದ್ದೇನೆ) ಎಷ್ಟು ಅಡಕವಾಗಿ ಆಹಾರದ ಮಹತ್ವವನ್ನು ತಿಳಿಸಿದ್ದಾರೆ, ಗೊತ್ತಾ? ‘ಸರಿಯಾಗಿ ಉಣ್ಣದೆ ಸರಿಯಾಗಿ ಯೋಚಿಸಬಲ್ಲರೇ, ಪ್ರೀತಿಸಬಲ್ಲರೇ, ನಿದ್ರಿಸಬಲ್ಲರೇ?’ ಎಂದು ಕೇಳುತ್ತಾರೆ.

ವಾಟ್ ಶೀ ಏಟ್ ಎಂಬ ಪುಸ್ತಕದಲ್ಲಿ ಆರು ಮಹಿಳೆಯರ ಜೀವ-ಜೀವನವನ್ನು ತಾವು ಉಣಬಡಿಸಿದ ಆಹಾರದ ಮೂಲಕ ನೋಡುತ್ತಾರೆ ಲಾರಾ ಶಪೀರೋ. ಇದರಲ್ಲಿನ ಅತಿ ಕೂತುಹಲಕಾರಿ ಕತೆ ಅಮೆರಿಕಾದ ಪ್ರೆಸಿಡೆಂಟ್ ರೂಸವೆಲ್ಟರ ಮಡದಿ ಎಲಿನಾರರದ್ದು. ಅವರ ಸಂಬಂಧವನ್ನು ‘ಗ್ರಾಂಡ್ ಪೊಲಿಟಿಕಲ್ ಪಾರ್ಟನರ್ಶಿಪ್ ಬಟ್ ಅ ಯೂನಿಯನ್ ಆಫ್ ಕ್ಯುಲಿನರಿ ಡಿಸ್ಕಾರ್ಡ್’ ಎಂದು ಶಪೀರೋ ಬಣ್ಣಿಸುತ್ತಾರೆ. ಅಡಿಗೆಯ ಬಗ್ಗೆ ಅವರಿಬ್ಬರ ಅನಿಸಿಕೆಗಳು ಸಂಪೂರ್ಣವಾಗಿ ವಿಭಿನ್ನ. ಫ್ರ್ಯಾಂಕ್ಲಿನ್ ಒಳ್ಳೆಯ ಆಹಾರ, ಅತ್ಯುತ್ತಮ ವೈನ್, ಹಿಗ್ಗುವ ಸಂಘವನ್ನು ಬಯಸಿದರೆ, ಊಟ-ತಿಂಡಿಯಲ್ಲಿ ಹಿತ, ಮಿತ, ಸರಳವಾದ ಎಲಿನಾರ್ ಎಷ್ಟೋ ಬಾರಿ ಒಬ್ಬರೇ ಉಣ್ಣುತ್ತಿದ್ದರಂತೆ. ಶಪೀರೋ ಪ್ರಕಾರ ವೈಟ್ ಹೌಸಿನ ಚರಿತ್ರೆಯ ಅಸಮರ್ಥ ಅತಿಥೇಯರಲ್ಲಿ ಇವರಿಗೆ ಸಾಟಿ ಇಲ್ಲ. ಆಕೆ ಎಂತಹ ಕೆಟ್ಟ ಅಡಿಗೆ ಬಡಿಸುತ್ತಿದ್ದರೆಂದರೆ ವೈಟ್ ಹೌಸಿಗೆ ಆಹ್ವಾನಿತರಾದ ಅತಿಥಿಗಳು ಹೋಗುವ ಮುಂಚೆ ಸ್ವಲ್ಪ ಊಟ ಮುಗಿಸಿಕೊಂಡು ಹೋಗುತ್ತಿದ್ದರಂತೆ. ಎಲಿನಾರ್ ಹೀಗೆ ಫ್ರ್ಯಾಂಕ್ಲಿನ್ನಿಗೆ ಕೆಟ್ಟ ಅಡಿಗೆ ಕೊಡುವುದನ್ನು ಆತನ ಅಫೇರುಗಳಿಗೆ ಪ್ರತ್ಯುತ್ತರವಾಗಿ ಈಕೆ ತೀರಿಸಿಕೊಂಡ ಸೇಡು ಎಂದು ಶಪೀರೋ ಪರಿಗಣಿಸುತ್ತಾರೆ. ಅಡಿಗೆಮನೆಯನ್ನು ನಿಯಂತ್ರಿಸುವ ಹೆಣ್ಣಿನ ಶಕ್ತಿಯ ಭಯಂಕರ ದೃಶ್ಯವನ್ನು ಕೊಡುತ್ತಾರೆ. ಅಗಾತ ಕ್ರಿಸ್ಟಿಯ ಹರ್ಕ್ಯೂಲ್ ಪೋಯ್ರೋಟ್ ಕೊಲೆಗಳಲ್ಲಿ ಮಡದಿಯನ್ನೇ ಮೊದಲು ಶಂಕಿಸುವುದರಲ್ಲಿ ಆಶ್ಚರ್ಯವೇನಿಲ್ಲ.

ಎಲ್ಲವೂ ಬದಲಾಗುತ್ತಿವೆಯೇ? ಇತ್ತೀಚಿಗೆ ಸ್ಟಾಕ್ಹೋಮಿನಲ್ಲಿರುವ ನನ್ನ ಮೊಮ್ಮಗನ ಜೊತೆ ಮಾತನಾಡಿದೆ. ಇಬ್ಬರೂ  ಕಾಕತಾಳಿಯವಾಗಿ ಭೇಲ್ ಪುರಿ ಮಾಡಿಕೊಂಡಿರುವ ಬಗ್ಗೆ ಗಮನಿಸಿದ ಮೇಲೆ ಅವನು ತುಸು ವಿಷಾದದಿಂದಲೇ ನೀನು ಹಸಿರು ಚಟ್ನಿ ಮಾಡಿಲ್ಲವಲ್ಲ ಎಂದ. ಕೊತ್ತಂಬರಿ ಸೊಪ್ಪು ಸಿಗದ ಕಾರಣ ನಾನು ಬರೇ ಹುಣಸೆ ಚಟ್ನಿ ಮಾಡಿಕೊಂಡಿದ್ದೆ. ಅವನು ಹಾಗಂದಿದ್ದೆ ಮಾತಿಲ್ಲದವಳಂತದೆ. ನನ್ನ ಜೀವನದಲ್ಲೇ ಚಟ್ನಿ ಮಾಡಿದ್ದಿಲ್ಲ; ಬರೀ ಭೇಲ್, ಪೂರಿ ಕೂಡ ಹಾಕುವುದಿಲ್ಲ. ಇಲ್ಲಿ ನನ್ನ ಮೊಮ್ಮಗ ನನ್ನನ್ನು ಮೀರಿಸಿ ಭಾರಿ ಮುಂದೆ ಸಾಗಿದ್ದ. ಇನ್ನೊಮ್ಮೆ ಆಲಿವ್ ಎಣ್ಣೆಯನ್ನು ‘ಡ್ರಿಜ಼ಲ್’ ಮಾಡುವುದರ ಬಗ್ಗೆ ಹೇಳಿದ. ಮಾಸ್ಟರ್-ಶೆಫ್ ಶೋಗಳನ್ನು ನೋಡದವಳಾಗಿದ್ದರೆ ನನಗಿದರ ಬಗ್ಗೆ ಸುಳಿವೂ ಇರುತ್ತಿರಲಿಲ್ಲ. ಆ ಚಂದದ ಅಡಿಗೆಮನೆ, ಹೊಳೆಯುವ ಉಪಕರಣಗಳನ್ನು ನೋಡುವುದರಲ್ಲಿ ನನಗೇನೋ ಸಂತೋಷ. ಅಲ್ಲಿಯ ಅಭ್ಯರ್ಥಿಗಳ ಉತ್ಸಾಹ ಸ್ಪರ್ಧಾತ್ಮಕತೆಯನ್ನು ನಾನು ಇಷ್ಟಪಡುತ್ತೇನೆ. ಅಲ್ಲಿಯೇ ನಾನು ಎಣ್ಣೆಯನ್ನು ‘ಡ್ರಿಜ಼ಲ್’ ಮಾಡುವ ಬಗ್ಗೆ ಕಲಿತದ್ದು. ಆ ಕಾರ್ಯಕ್ರಮಗಳಲ್ಲಿ ವೇಗ ಮತ್ತು ಚುರುಕುತನಕ್ಕೆ ಕೊಡುವ ಪ್ರಾಧಾನ್ಯತೆ ನೋಡಿ ಬೆರಗಾಗುತ್ತೇನೆ: ಉತ್ತಮ ಅಡಿಗೆ ಯಾವಾಗಲು ವೇಗವಾಗಿ ತಯಾರಿಸದ ಅಡಿಗೆ ಯಾಕಾಗಬೇಕು? ನನ್ನತ್ತೆ ಸಾರನ್ನು ಕಲ್ಲು ಕೊಳದಪ್ಪಲೆಯಲ್ಲಿ ಮಾಡುತ್ತಿದ್ದರು. ಆ ಕಲ್ಲು ಸಾರಿನ ಶಾಖವನ್ನು ಸುಮಾರು ಹೊತ್ತು ಕಾಪಾಡುತ್ತಿತ್ತು. ಒಲೆಯಿಂದ ತೆಗೆದ ಮೇಲೂ ಸಾರು ಮೆಲ್ಲಗೆ ಕುದಿಯುವುದು. ಇದರಿಂದ ಬೇಳೆ ಮತ್ತು ಮಸಾಲೆ ಸಲೀಸಾಗಿ ಹೊಂದುತ್ತಿತ್ತು ಎಂದು ಹೇಳುತ್ತಿದ್ದರು.

ಈ ಸಾರು ಎಂದರೇನು? ಈ ಪ್ರಶ್ನೆ ಭಾರತದ ಲೇಖಕರನ್ನು ತೊಡಕಿಸಿರುವ ಮತ್ತೊಂದು ಪ್ರಶ್ನೆಗೆ ನಮ್ಮನ್ನು ಒಯ್ಯುತ್ತದೆ. ಇಂಗ್ಲೀಷಿನಲ್ಲಿ ಸಾರು ಇದನ್ನು ಏನೆಂದು ಕರೆಯುವುದು? ಅಂದರೆ ಭಾರತೀಯ ಪಾಕ-ಪಾನೀಯಗಳನ್ನು ಇಂಗ್ಲೀಷಿನಲ್ಲಿ ಬರೆಯುವುದು ಹೇಗೆ? ಸಾಮಾನ್ಯವಾಗಿ ಇಡ್ಲಿಗೆ ಬಳಸುವ ‘ಡಂಪಲಿಂಗ್’ ದೋಸೆಗೆ ಬಳಸುವ ‘ಪ್ಯಾನ್ಕೇಕ್’ ಭಾರತೀಯ ಓದುಗರಿಗೆ ಏನು ಸೂಚಿಸುತ್ತದೆ? ನಾನು ಆಗಾಗ ನನ್ನನ್ನೇ ಕೇಳಿಕೊಳ್ಳುತ್ತೇನೆ: ಇಂಗ್ಲಿಷಿನಲ್ಲಿ ‘ಕಡಾಯಿ’ ಪದಕ್ಕಿಂತ ‘ವೋಕ್’ ಪದ ಯಾಕೆ ಬೇಗ ಅರ್ಥವಾಗುತ್ತದೆ? ಇತ್ತೀಚಿಗೆ ಗ್ಲೋಬಲೈಸೇಷನ್ ದೆಸೆಯಿಂದ ಭಾರತೀಯ ಆಹಾರ ಪದಾರ್ಥಗಳು ವಿಶ್ವದಾದ್ಯಂತ ಪರ್ಯಟನೆ ಮಾಡಿ ಸುಮಾರು ಬದಲಾವಣೆಗಳಾಗಿವೆ. ಸಮೋಸಾ, ರೋಟಿ, ನಾನ್, ಇತರೆ ಪದಗಳನ್ನು ಸಲೀಸಾಗಿ ಬಳಸುತ್ತೇವೆ. ಆದರೆ ಸಮಸ್ಯೆ ಅಲ್ಲಿಗೆ ಮುಗಿಯುವುದಿಲ್ಲ. ಭಾರತ ಒಂದು ಸಂಕೀರ್ಣವಾದ ದೇಶ: ಪ್ರತಿ ಪ್ರದೇಶದಲ್ಲೂ ಅದರದ್ದೇ ಆದ ಪಾಕ ಪದ್ಧತಿಗಳು, ಆ ಆ ಪ್ರದೇಶದ ಭಾಷೆಯಲ್ಲಿ ಆ ಆ ಅಡಿಗೆಗೆ ಬೇರೆ ಹೆಸರುಗಳು. ಈ ಸಾರು – ಮತ್ತೆ ಇಲ್ಲಿಗೆ ಬಂದೆ, ನೋಡಿ — ಬೇಳೆಯಿಂದ ಮಾಡುವ ಪದಾರ್ಥ ಒಂದರ ಕನ್ನಡದ ಹೆಸರು. ನೀರಿನ ಸಾಂದ್ರತೆ ಹೊಂದಿರುವ, ಗೊಂಟಲಿಗಿಳಿಸುತ್ತಲೇ ಹಿತವಾಗಿ ಖಾರವೆನಿಸುವ, ರಸವತ್ತಾದ  ಸಾರನ್ನು ಸಾರುಪ್ರಿಯರು ಹಾಗೆಯೇ ಕುಡಿಯಲು ಇಷ್ಟ ಪಡುತ್ತಾರೆ. ಆ ನಿಟ್ಟಿನಲ್ಲಿ ತಮ್ಮ ನಾಲಿಗೆ ಗಂಟಲುಗಳನ್ನು ಸುಟ್ಟಿಕೊಂಡರೂ ಸರಿಯೇ. ತಮಿಳಿನಲ್ಲಿ ಇದು ರಸಂ: ಸಾರಿಗಿಂತ ಹೆಸರುವಾಸಿಯಾದ ಪದ. ಕನ್ನಡದಲ್ಲಿ ಬೇರೆ ಬೇರೆ ಬೇಳೆ ಪದಾರ್ಥಗಳಿಗೆ ಬೇರೆ ಬೇರೆ ಹೆಸರುಗಳಿವೆ:  ಹುಳಿ, ಕೂಟು, ತೊವ್ವೆ, ಸಾಂಬಾರು, ಹೀಗೆ. ಪ್ರತಿಯೊಂದೂ ವಿಶಿಷ್ಟ. ಈ ವ್ಯತ್ಯಾಸಗಳನ್ನೆಲ್ಲ ಕನ್ನಡೇತರ ಓದುಗರಿಗೆ ಹೇಗೆ ಮುಟ್ಟಿಸುವುದು? ಅಡಿಗೆ ಪುಸ್ತಕದಲ್ಲಾದರೆ ಪ್ರತ್ಯೇಕಿಸಬೇಕಾದದ್ದು ಅವಶ್ಯ. ಆದರೆ ಕತೆಗಳಲ್ಲಿ ವಿವರಣೆ ಯಾಕೆ? ಓದುಗರಿಗೆ ಬೇಕಾದರೆ ತಿಳಿದುಕೊಳ್ಳಲಿ. ಆ ಪದವನ್ನು ಉಪಯೋಗಿಸುವ ದೃಶ್ಯದ ಒಟ್ಟಾರೆ ಹುರುಳು ಗೊತ್ತಾದರೆ ಸಾಕು ಎನಿಸುತ್ತದೆ. ನಾನಂತೂ ಡಂಪಲಿಂಗ್-ಪ್ಯಾನ್ಕೇಕ್ ಪಂಗಡಕ್ಕೆ ಸೇರಿಲ್ಲ ಎಂದು ಖುಷಿ ಪಡುತ್ತೇನೆ.

ನಾವು ಇಷ್ಟಪಡುವ ಹಲವು ಕತೆಗಳಿಗೆ ಹೇಗೋ ಹಾಗೆಯೇ ನನ್ನ ಈ ಅಡಿಗೆಯ ಕತೆಗೊಂದು ಶುಭ ಮಂಗಳವಿದೆ. ಈಗ ಅಡಿಗೆ ಮಾಡುವುದರ ಬಗ್ಗೆ ನನಗೆ ಯಾವ ತಿರಸ್ಕಾರವೂ ಇಲ್ಲ. ಬದಲಿಗೆ ಬೇರೆಯೇ ಸಂಬಂಧ. ಮಸಾಲೆಗಳ ಜಾದೂ ಚಮತ್ಕಾರವನ್ನು ಕಲಿಯುತ್ತಿದ್ದೇನೆ; ಯಾವ ಮಸಾಲೆಯ ಜೊತೆ ಯಾವುದು ಹೊಂದುತ್ತದೆ ಎಂದು ಕಂಡುಕೊಳ್ಳುತ್ತಿದ್ದೇನೆ; ಮಸಾಲೆಯನ್ನು ತರಿತರಿಯಾಗಿ ರುಬ್ಬಿದರೆ ಹೆಚ್ಚು ರುಚಿ ಎಂದು, ಅತಿ ಸಾಧಾರಣವಾದ ಜೀರಿಗೆಯು ಎಲ್ಲ ಮಸಾಲೆ ಬೆರಿಕೆಗಳಲ್ಲಿ ಹೀರೋ (ಇದೂ ಮಾಸ್ಟರ್-ಶೆಫ್ ಪದವೇ) ಆಗಬಹುದೆಂದು ಕಲಿತಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ, ಸುತ್ತಮುತ್ತ ಎಷ್ಟೇ ರೆಸ್ಟೋರೆಂಟುಗಳಿದ್ದರೂ, ಎಷ್ಟೇ ಟೇಕವೇ ಮಾಡಿದರು, ಎಷ್ಟೇ ರೆಡಿ-ಟು-ಈಟ್ ಕೊಂಡರು, ಮನೆಯಲ್ಲಿ ಬೇಯಿಸಿ ತಿನ್ನುವುದರಷ್ಟು ಹಿತಕರ ಯಾವುದು ಇಲ್ಲ. ತುಪ್ಪ ನಿಂಬೆರಸ ಹಾಕಿದ ಸಾಧಾರಣ ವರಣಭಾತ್ ಕೂಡ ರೆಸ್ಟೋರೆಂಟುಗಳಿನ ಎಷ್ಟೋ ವಿನೂತನ ಎಕ್ಸಾಟಿಕ್ ತಿನಿಸುಗಳಿಗಿಂತ ಹೆಚ್ಚಾಗಿ ರುಚಿಸುತ್ತದೆ.

1 Comment

  1. Surabhi

    You have done a great job Vignesh!! Keep up the best in you.. good luck

Leave a Reply

Your email address will not be published. Required fields are marked *

oneating-border
Scroll to Top
  • The views expressed through this site are those of the individual authors writing in their individual capacities only and not those of the owners and/or editors of this website. All liability with respect to actions taken or not taken based on the contents of this site are hereby expressly disclaimed. The content on this posting is provided “as is”; no representations are made that the content is error-free.

    The visitor/reader/contributor of this website acknowledges and agrees that when he/she reads or posts content on this website or views content provided by others, they are doing so at their own discretion and risk, including any reliance on the accuracy or completeness of that content. The visitor/contributor further acknowledges and agrees that the views expressed by them in their content do not necessarily reflect the views of oneating.in, and we do not support or endorse any user content. The visitor/contributor acknowledges that oneating.in has no obligation to pre-screen, monitor, review, or edit any content posted by the visitor/contributor and other users of this Site.

    No content/artwork/image used in this site may be reproduced in any form without obtaining explicit prior permission from the owners of oneating.in.