ಕನ್ನಡಕ್ಕೆ: ವಿಘ್ನೇಶ ಹಂಪಾಪುರ
ಓ, ಲೈಫ್ ಇಸ್ ಬಿಗ್ಗರ್
ಇಟ್ಸ್ ಬಿಗ್ಗರ್ ತಾನ್ ಯೂ
ಅಂಡ್ ಯೂ ಆರ್ ನಾಟ್ ಮಿ
—ಮೈಕಲ್ ಸ್ಟೈಪ್, ಆರ್. ಇ. ಎಮ್.
ಪಾಕಶಾಲೆಯೊಂದರ ಸೂತ್ರಧಾರಿಯ ಹಾಗೆ ತನ್ನ ಅಡುಗೆಯ ಕಲೆಯನ್ನು ನಿಖರವಾಗಿ, ನಿಪುಣತೆಯಿಂದ, ಮತ್ತು ಮರುಕವೇ ತೋರದ ಸೌಂದರ್ಯದ ಜೊತೆಗೆ ಪ್ರಯೋಗಿಸುತ್ತಾಳೆ ಅಮ್ಮ. ಈಗಲೂ, ಅದೆಷ್ಟು ವರ್ಷಗಳ ನಂತರವೂ, ಅವಳು ಕಷ್ಟಪಟ್ಟು ಕೂಡಿಟ್ಟ ಹಣದಿಂದ ಕೊಂಡ, ಅಮೂಲ್ಯವಾದ ನೊರಿಟಾಕೆ ಚೈನಾ ಸೆಟ್ಟುಗಳು ಹಾಗೇ ಭದ್ರವಾಗಿವೆ; ಆ ಗ್ರೇವೀ ಬಟ್ಟಲಿನ ಮೇಲೆ ಒಂದು ಚಕ್ಕೆ ಸಹಿತ ಇಲ್ಲ. ಈ ಕತೆ ಪಾರಂಪರ್ಯವಾಗಿ ಪಡೆದ ಕ್ರಾಕರಿಗಳ ಬಗ್ಗೆಯೂ ಅಲ್ಲ, ಪೂರ್ವ ಪೀಳಿಗೆಯ ಬಗ್ಗಿನ ವಿಡಂಬನೆಯೂ ಅಲ್ಲ. ಬದಲಿಗೆ, ಒಬ್ಬಳು ಹುಡುಗಿ ಮತ್ತವಳ ಕನಸಿನ ಲೋಕದ ಕತೆ.
ಮತ್ತೆಲ್ಲಿಂದ ಶುರು ಮಾಡಲಿ? ಮರಿಯಾ ವಾನ್ ಟ್ರಾಪ್ ಸೂಚಿಸಿದಂತೆ ಮೊದಲಿನಿಂದಲೇ ಪ್ರಾರಂಭಿಸುತ್ತೇನೆ.
ಅಮ್ಮನ ತಂದೆ, ಬೆಂಗಳೂರು ವೆಂಕಟ ಬಾಲಮೂರ್ತಿಯವರು, ಇಂದಿನ ತೆಲಂಗಾಣ ಅಂದಿನ ಅವಿಭಜಿತ ಆಂಧ್ರಪ್ರದೇಶದ ಸಾಧಾರಣ ಕುಟುಂಬದವರು. ಅವರ ಮಾತೃಭಾಷೆ ತೆಲುಗು. ಚಿಕ್ಕಂದಿನಿಂದಲೇ ಮನೆಯ ಜವಾಬ್ದಾರಿಗಳನ್ನು ಹೊತ್ತ ಅವರಿಗೆ ಶಾಲಾ ಶಿಕ್ಷಣ ಪಡೆಯಲಾಗಲಿಲ್ಲ. ಅವರು ಮದುವೆಯಾದದ್ದು ಕರಾವಳಿಯ ಬ್ರಹ್ಮಾವರದ ತುಳು ಮನೆತನದ ಶಾಲಾಮಾಸ್ತರರ ಮಗಳು ಸುಶೀಲಾರನ್ನು. ತಾನು ಹೋಗಲಾಗದ ಕಾಲೇಜಿಗೆ ಸುಶೀಲಾರನ್ನು ಕಳುಹಿಸಿ ಅವರು ಡಾಕ್ಟರ್ ಆಗುವ ರೀತಿ ಬಾಲಮೂರ್ತಿಯವರು ನೋಡಿಕೊಂಡರು. ಬೆಂಗಳೂರಿಗೆ ವಲಸೆ ಬಂದ ಯುವಕರಿಗೆ ಕುಸ್ತಿ, ಯೋಗ, ಮತ್ತು ಇತರೆ ಶಾರೀರಿಕ ಚಟುವಟಿಕೆಗಳನ್ನು ಹೇಳಿಕೊಡುವ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ನವಜೀವನ ವ್ಯಾಯಾಮಶಾಲೆಯು ಅಜ್ಜಿಯ ನವಜೀವನ ಕ್ಲಿನಿಕ್ ಪಕ್ಕದಲ್ಲಿಯೇ ಬಸವನಗುಡಿಯ ಕನ್ಸರ್ವೆನ್ಸಿ ರಸ್ತೆಯಲ್ಲಿ ನಡೆಯುತ್ತಿತ್ತು. ಅವರಿಬ್ಬರಿಗೆ ನಾಲ್ವರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ. ಇವರಲ್ಲಿ ಹಿರಿಯಕ್ಕ ನನ್ನ ಅಮ್ಮ. ಪ್ರತಿಯೊಬ್ಬರೂ ಜಾತಿಯ ಹಾಗು ಭಾಷೆಯ ಹೊರಗೆ ಮದುವೆಯಾದ ಕಾರಣ ತೆಲುಗು, ತುಳು ಮತ್ತು ಇಂಗ್ಲಿಷ್ ಮಾತನಾಡುವ ಮನೆಯೊಳಗೆ ತಮಿಳು, ಹೆಬ್ಬಾರ ತಮಿಳು, ಮರಾಠಿ, ಕೊಂಕಣಿ ಮತ್ತು ಕನ್ನಡ ಸೇರಿದವು. ಇದು 1940ರ ಆಸು ಪಾಸು.
ಇಂದಿನ ಪಾಕಿಸ್ತಾನದ ಪಂಜಾಬಿನ ಸಿಂಧಿನವರಾದ ನನ್ನ ಅಪ್ಪನ ತಂದೆ ಭಗತ್ ರಾಮ್ ಕುಮಾರ್ ಬಲೂಚಿಸ್ತಾನದ ಕ್ವೆಟ್ಟಾದಲ್ಲಿ ಬೆಳೆದದ್ದು. ಅವರದ್ದು ಕುಮಹಾರ ಜಾತಿ ಇರಬಹುದೇನೋ, ಆದರೆ ಖಚಿತವಾಗಿ ಹೇಳುವುದಕ್ಕೆ ಅವರು ಎಂದೂ ಜಾತಿಯ ಬಗ್ಗೆ ಮಾತನಾಡಿದ್ದಿಲ್ಲ. ಸ್ವಾತಂತ್ರ್ಯದ ಮುಂಚಿನ ಆದರ್ಶ ದಿನಗಳಲ್ಲಿ ಭಾರತದ ಹಲವಾರು ವರ್ಗಗಳ ಜನರಿಗೆ ‘ಜಾತಿ’ಯು ಗತಕಾಲದ ಲಕ್ಷಣವಾಗಿ ಹೋಗಿತ್ತು. ರಾಷ್ಟ್ರೀಯತೆ, ಅನ್ನಿ ಬೆಸಂತ್ ಹಾಗೂ ಇನ್ನೂ ಚಿಗುರುತ್ತಿದ್ದ ಥಿಯೊಸಾಫಿಕಲ್ ಚಳುವಳಿಯ ಅಲೆಗಳಲ್ಲಿ ಸಿಲುಕಿ, ಭಗತ್ ರಾಮ್ ಕುಮಾರ್ ಶಿಕ್ಷಣಕ್ಕೆಂದು ಬನಾರಸ್ ಹಿಂದು ವಿಶ್ವವಿದ್ಯಾಲಯವನ್ನು ತಲುಪಿದರು. ಅದೇ ಬನಾರಸ್ಸಿಗೆ ವಿದ್ಯಾಭ್ಯಾಸಕ್ಕಾಗಿ ಅವರ ಮಡದಿಯಾಗುವ ಹೆಣ್ಣು ದಕ್ಷಿಣದಿಂದ ಬಂದಿದ್ದರು. ಇದೇ ಬಲೂಚಿಸ್ತಾನಿನ ಭಗತ್ ನನ್ನ ಅಜ್ಜಿ ಜಯಲಕ್ಷ್ಮಿಯನ್ನು ಮದುವೆಯಾದ ಕತೆ. ಜಯಲಕ್ಷ್ಮಿ ಮಡ್ರಾಸಿನಲ್ಲಿ ನೆಲೆಸಿದ್ದ ಓರ್ವ ಆರ್ಕೋಟ್ ರಂಗನಾಥ ಮೊದಲಿಯಾರ್ ಅವರ ಮಗಳು. ಭಗತ್-ಜಯಲಕ್ಷ್ಮಿ ದಂಪತಿಗೆ ಮೂರು ಗಂಡು ಮಕ್ಕಳು, ಒಬ್ಬಳು ಹೆಣ್ಣುಮಗಳು: ನನ್ನ ತಂದೆ ಆ ಮೂವರಲ್ಲಿ ಕಿರಿಯವರು. ಅವರ ಮಕ್ಕಳು ಒಬ್ಬೊಬ್ಬರೂ ಜಾತಿಯ ಹೊರಗೆ, ಕೆಲವರು ರಾಷ್ಟ್ರೀಯತೆಯ ಹೊರಗೆ ಕೂಡ ತಮಗಿಷ್ಟ ಬಂದವರನ್ನು ಕಟ್ಟಿಕೊಂಡರು. ಈ ಜಂಗುಳಿಗೆ ಸೇರಿದವರಲ್ಲಿ ಅಮ್ಮ ಒಬ್ಬಳು, ಇನ್ನೊಬ್ಬರು ಆಸ್ಟ್ರೇಲಿಯಾದವರು, ಮತ್ತೊಬ್ಬರು ಆಂಗ್ಲೋ-ಇಂಡಿಯನ್, ಇನ್ನೊಬ್ಬರು ಚೀನಿ-ಮಲೇಶಿಯನ್.
***
ಒಡನೆಯೇ ಮುಂದಿನ ದೃಶ್ಯಕ್ಕೆ ಬರೋಣ: ನಾನು ಮತ್ತು ನನ್ನ ತಮ್ಮ ಬೆಳೆದ, ಬೆಂಗಳೂರಿನ ನಂದಿದುರ್ಗ ರಸ್ತೆಯಲ್ಲಿದ್ದ ನಮ್ಮ ಅಪ್ಪ-ಅಮ್ಮನ ಪುಟ್ಟ ಮನೆ. ನಮ್ಮ ಮನೆಯ ಕಿರಿದಾದ, ಕತ್ತಲೆಯ ಅಡುಗೆಮನೆಯಲ್ಲಿ ಒಂದು ರೆಡ್-ಆಕ್ಸೈಡ್ ಕಟ್ಟೆ, ಒಂದು ಸಿಮೆಂಟ್ ಸಿಂಕು. ಅಮ್ಮ ಬಿಸಿ-ಬಿಸಿ ಚಪಾತಿಯ ಮೇಲೆ ಮನೆಯಲ್ಲಿ ಮಾಡಿದ್ದ ತುಪ್ಪವನ್ನು ಸವರುತ್ತಿದ್ದಾಗ ನಾನು ಅಡುಗೆಮನೆಯ ನೆಲದ ಮೇಲೆ ಕೂರುತ್ತಿದ್ದ ಹಸಿ ನೆನಪು ಹಾಗೇ ಇದೆ. ಇದು 1960ರ ದಶಕ. ಹಾಲಿನವನು ಫಾಯಿಲಿನಿಂದ ಮುಚ್ಚಿದ ಗ್ಲಾಸ್ ಬಾಟಲುಗಳಲ್ಲಿ ಹಾಲು ತಂದಿಡುತ್ತಿದ್ದ. ಮೊಟ್ಟೆಯವನು ಹೆಗಲ ಮೇಲೆ ಕೋಲೊಂದನ್ನು ಸಂಭಾಳಿಸಿಕೊಂಡು ಅದರ ಮೇಲೆ ನೇತಾಡುವ ಬುತ್ತಿಗಳಲ್ಲಿ ಮೊಟ್ಟೆಗಳನ್ನು ತರುತ್ತಿದ್ದ. ಕೆಲವೊಮ್ಮೆ ಆ ಬುತ್ತಿಗಳೊಳಗೆ ಪುರುಹಕ್ಕಿಗಳೂ (ಕ್ವೇಯ್ಲ್) ಇರುತ್ತಿದ್ದವು. ಹಾಗೇ, ಮನೆಯ ಅಕ್ಕ-ಪಕ್ಕ ಎಲ್ಲೆಡೆ ಚಾಕು-ಕತ್ತರಿಗಳನ್ನು ಹರಿತ ಮಾಡಲು ಬರುತಿದ್ದ ‘ಕೈಂಚಿ-ಚೈಂಚಿ’ಯವನ ಸದ್ದು ನಮಗೆ ಚಿರಪರಿಚಿತವಾಗಿ ಹೋಗಿತ್ತು.
ಪ್ರತಿ ಭಾನುವಾರ ಅಪ್ಪ-ಅಮ್ಮ ರಸೆಲ್ ಮಾರ್ಕೆಟ್ಟಿಗೆ ಶಾಪಿಂಗ್ ಹೋಗುತ್ತಿದ್ದರು. ಅಮ್ಮ ತರಕಾರಿ, ಮೀನು, ಮಾಂಸ ಕೊಂಡು ತಂದಿದ್ದರೆ, ಅಪ್ಪ ಪ್ಲಾಸ್ಟಿಕ್ ಚೀಲವೊಂದರಲ್ಲಿ ಬಣ್ಣಬಣ್ಣದ ಮೀನುಗಳಾದ ಟೈಗರ್ ಬಾರ್ಬುಗಳು, ನಿಯಾನ್ ಟೆಟ್ರಾಗಳು, ಗೌರಮಿಗಳು, ಇವುಗಳನ್ನು ತಂದಿರುತ್ತಿದ್ದರು. ಇವುಗಳನ್ನು ಹಾಕಲು ಮೀನುಟ್ಯಾಂಕನ್ನು ಸಿದ್ಧ ಮಾಡುವಾಗ ಅಡುಗೆಮನೆಯ ಸಿಮೆಂಟ್ ಸಿಂಕಿನೊಳಗೆ ಆ ಮೀನುಗಳನ್ನು ಬಿಟ್ಟುಬಿಡುತ್ತಿದ್ದರು. ಒಂದು ಸುಮಿತ್ ಮಿಕ್ಸಿ ಮತ್ತು ಒಂದು ಕಪ್ಪು ತಗಡಿನ ಸ್ಟವ್-ಟಾಪ್ ಓವನ್ ಇದ್ದ ಈ ಅಡುಗೆಮನೆಯಲ್ಲಿ ಅಮ್ಮ ಎಂದೂ ಅಡುಗೆ ಮಾಡಿದ್ದು ನಿಲ್ಲಿಸಿದ್ದೇ ಇಲ್ಲ: ಆ ಅಡುಗೆಯು ನಮ್ಮ ಮನೆತನದ ಹಲವಾರು ಇತಿಹಾಸಗಳನ್ನು ಹೆಣೆದಿರುತ್ತಿತ್ತು, ನಮಗೆ ನಾಲ್ವರಿಗೆ ‘ಮನೆ’ ಎಂಬುದನ್ನು ಸೂಚಿಸುತ್ತಿತ್ತು. ತನ್ನ ಬಾಲ್ಯದ ಮನೆಯಲ್ಲಿ ತಯಾರಿಸುತ್ತಿದ್ದ ಅಡುಗೆಗಳನ್ನೆಲ್ಲಾ ಅಮ್ಮ ನಮಗೆ ಉಣಬಡಿಸುತ್ತಿದ್ದಳು: ರಾಗಿ ಮುದ್ದೆ, ಮತ್ತು ಅದರ ಜೊತೆಗೆ ತನ್ನ ತಂದೆ ಇಷ್ಟ ಪಡುತ್ತಿದ್ದ ಸಬ್ಬಸಿಗೆ ಸೊಪ್ಪು, ಮೂಲಂಗಿ, ದೊಡ್ಡದಾಗಿ ಹೆಚ್ಚಿದ ಆಲೂಗೆಡ್ಡೆ ಹಾಗು ಕಾಯಿಹಾಲು ಹಾಕಿದ ಮಟನ್ ಕರ್ರಿ, ದೆಂಜಿ ಆಜಾದಿನ (ಏಡಿ ಮಾಂಸದ ಡ್ರೈ ಫ್ರೈ), ಯೆಟ್ಟಿ ದ ಗಸಿ (ಪ್ರಾನ್ ಸೀಗಡಿಯ ಕರ್ರಿ), ಹಾಗು ತನ್ನ ತಾಯಿಯ ಮೂಲ ಮಂಗಳೂರಿನ ರುಚಿಗಳಾದ ತೆಂಗಿನೆಣ್ಣೆಯಲ್ಲಿ ಕರೆದ ಮಕಾರೆಲ್ ಮತ್ತು ಸಾರ್ಡೀನ್ ಮೀನುಗಳು. ಆದರೆ ಶಾಲಾ ದಿನಗಳಲ್ಲಿ ಮಾತ್ರ ಪ್ರತಿನಿತ್ಯದ ತಿಂಡಿ ಮೊಟ್ಟೆ ಮತ್ತು ಬಟರ್ ಟೋಸ್ಟ್: ಇಂಗ್ಲೆಂಡಿನಲ್ಲಿ ಅಧ್ಯಯನ ಮಾಡಿದ್ದ ಅಪ್ಪನಿಗೆ ಇದೇ ಪ್ರೀತಿ.
‘ಹೂಸ್ ಎಗ್ ಇಸ್ ದಿಸ್?’ ಎಂದು ಕೂಗುತ್ತಿದ್ದಳು ಅಡುಗೆಮನೆಯಿಂದ: ‘ಯಾರ ಮೊಟ್ಟೆ ಇದು?’
ಪ್ಯಾನಿನಿಂದ ಸೀದಾ ತಟ್ಟೆಗೆ ಫ್ರೈಡ್ ಎಗ್ ಹಾಕಿಸಿಕೊಳ್ಳಲು ತಟ್ಟೆಗಳನ್ನು ಹಿಡಿದು ಅಮ್ಮನ ಸುತ್ತ ನಾವು ಮಕ್ಕಳು ಗುಂಪಾದರೆ, ಅಪ್ಪ ‘ದಿ ಹೆನ್ಸ್ ಎಗ್’ – ‘ಕೋಳಿಯ ಮೊಟ್ಟೆ’ – ಎಂದು ಹೇಳುತ್ತಾ ಅವರ ಬೆಪ್ಪು ಜೋಕಿಗೆ ತಾವೇ ಜೋರಾಗಿ ನಗುತ್ತಿದ್ದರು.
ಶಾಲೆಯ ಊಟದ ಡಬ್ಬಿಗಳಿಗೆ ಅವಳ ಉತ್ತರ ಭಾರತದ ಮಾವನಿಗೆ ಪ್ರಿಯವಾದ ಹಿತ, ಮಿತ, ಸ್ವಾದಿಷ್ಟ ಫುಲ್ಕಾಗಳನ್ನು ಹಾಕುತ್ತಿದ್ದಳು. ಅದರ ಜೊತೆ ಯಾವುದೋ ಒಂದು ಪಲ್ಯ – ‘ಬೀಟ್ರೂಟ್ ಪಲ್ಯಾನಾ? ಛೀ!’ ಎಂದೆಲ್ಲಾ ಹೇಳುತ್ತಿದ್ದೆವು ನಾವು ಕೃತಘ್ನರು – ಮತ್ತು ಮೊಸರು. ನಾವುಗಳೋ, ಈನಿಡ್ ಬ್ಲೈಟನಿನ ಪುಸ್ತಕಗಳಲ್ಲಿನಂತೆ ಹ್ಯಾಮ್ ಸ್ಯಾಂಡ್ವಿಚ್ಚುಗಳು ಬೇಕು ಎಂದು ಮುನಿಸಿಕೊಂಡು ಗೋಳಾಡುತ್ತಿದ್ದೆವು. ಏನೂ ತೋಚದ ಶನಿವಾರಗಳಂದು ಹಾಗು ನಾವು ಮನೆಯಲ್ಲಿದ್ದು ಅವಳು ಕೆಲಸ ಮಾಡುತ್ತಿದ್ದ ದಿನಗಳಂದು ಕೆಂಪನ್ನಕ್ಕೆ ಶ್ರಿಂಪು ಸೀಗಡಿ ಮೀನುಗಳ ಡ್ರೈ ಕರ್ರಿಯನ್ನು ಸೊಪ್ಪು-ಹಸಿರುಗಳ ಜೊತೆ ಮಾಡಿಟ್ಟಿರುತ್ತಿದ್ದಳು. ಅಂದೆಂದೂ ಇಷ್ಟಪಡದ ಆ ಅಡುಗೆಗೆ ಈಗ ಏನೋ ವಿಚಿತ್ರ ಹಂಬಲ.
***
ಇಂದು ಅಷ್ಟು ಕೇಳಿರದ 70ರ ಎಷ್ಟೋ ಸಿಹಿ ತಿನಿಸುಗಳನ್ನು ತಯಾರಿಸುವುದರಲ್ಲಿ ಅಮ್ಮನದ್ದೇ ಎತ್ತಿದ ಕೈ. ಅವಳು ಕೇಕಿನ ಮೇಲೆ ಕ್ಯಾನಿನ ಪೀಚ್ ಹಣ್ಣುಗಳು, ಕಸ್ಟರ್ಡ್ ಮತ್ತು ಕ್ರೀಮ್ ಹಾಕಿ ಮಾಡುತ್ತಿದ್ದ ಪೀಚ್ ಪೋಚ್ ತಟ್ಟೆಯ ಮೇಲೆ ಪೋಚ್ಡ್ ಎಗ್ಸ್ ರೀತಿಯೇ ಕಾಣುತ್ತಿತ್ತು. ಇನ್ನೊಂದು ಅದ್ಭುತವಾದ ಏಪ್ರಿಕಾರ್ಟ್ ಕ್ರೀಮ್ ಪೈ: ಕುಬಾನಿ ಕಾ ಮೀಠಾದ ಹಾಗೆ, ಅದೇ ಕ್ರಾಕ್-ಜ್ಯಾಕ್ ಕ್ರಸ್ಟಿನ ಜೊತೆ. ಜೇನುತುಪ್ಪದ ಬಣ್ಣದ ಬಟ್ಟಲುಗಳಲ್ಲಿ ಸೆಟ್ ಆದ ಕಾಫೀ ಕ್ರೆಮ್ ಮೂಸ್. ಮಡಿವಾಳ – ಮ್ಯಾಗ್ಪೈ – ಪಕ್ಷಿಯೊಂದರ ಹಾಗೆ ತನಗೆ ಮಾತ್ರ ಪರಿಚಿತವಿದ್ದ ಪ್ರಪಂಚಗಳಿಂದ – ತನ್ನ ಸಹೋದ್ಯೋಗಿಗಳ ಮತ್ತು ಸ್ನೇಹಿತರ ಕಡೆಯಿಂದ, ಈಗ ಹೆಸರು ನೆನಪು ಬರದ ಒಂದು ದೊಡ್ಡ ನೀಲಿಯ ಅಡುಗೆ ಪುಸ್ತಕದಿಂದ – ರೆಸಿಪಿಗಳನ್ನು ಹೆಕ್ಕುತ್ತಿದ್ದಳು ಅಮ್ಮ. ಯುರೋಪಿನಿಂದ ಬಂದ ವಿಜ್ಞಾನಿಯಿಂದ ಬೋಲೋನಿಸ್ ಮತ್ತು ಗಸ್ಪ್ಯಾಚೋ ಸೂಪು, ಕಿರ್ಶ್ಚ್ ಬದಲು ರಮ್ ಹಾಕಿದ ಬ್ಲ್ಯಾಕ್ ಫಾರೆಸ್ಟ್ ಕೇಕ್, ಅನಾನಸ್ ಹಣ್ಣುಗಳ ಜೊತೆ ಹಂದಿಮಾಂಸದ ಚಾಪ್ಸ್, ಚೀಸ್ ಮತ್ತು ಮಶ್ರೂಮ್ ಹಾಕಿದ ಕ್ರೆಪ್ಪುಗಳು, ತನ್ನ ಓರಗಿತ್ತಿ ಮೇನಕಾಳಿಂದ ದ್ರಾಕ್ಷಿ ಸಾಸ್ ಹಾಕಿದ ಸ್ಟೀಮ್ ಪುಡ್ಡಿಂಗ್. ಎಲ್ಲಕ್ಕಿಂತ ಮುಖ್ಯವಾಗಿ, ಎಂದೂ ಸುಲಭವಾಗಿ ಹೊಗಳದ ನನ್ನ ಅಪ್ಪನ ನಾಲಿಗೆಯನ್ನು ಅಮ್ಮ ಓಲೈಸುತ್ತಿದ್ದಳು. ಒಳ್ಳೇ ಕಿರಿಕಿರಿ ಮನುಷ್ಯ, ಅಪ್ಪ: ಟೊಮಾಟೋ ಸೂಪ್ ಮಾಡಿದರೆ ಯಾವುದೋ ನಿಂಬೆ ಸಾರನ್ನು ಬಯಸುತ್ತಿದ್ದರು, ಅದೇ ಫಿಶ್ ಬೇಕ್ ಮಾಡಿ ಮುಂದಿಟ್ಟಾಗ ‘ಅನ್ನ, ದಾಲ್, ತುಪ್ಪ’ ಎಂದು ಕೇಳುತ್ತಿದ್ದರು. ಅವಳ ಇಡ್ಲಿ, ಪನಿಯಾರಂ ಇವುಗಳನ್ನೆಲ್ಲಾ ಇಷ್ಟಪಡುತ್ತಿದ್ದರು, ನಿಜ. ಆದರೆ ಅಕ್ಕಿ ರೊಟ್ಟಿ ಮತ್ತು ಡ್ರೈ ಮೀನಿನ ಚಟ್ನಿ ಮಾತ್ರ ಅವರಿಗೆ ಆಗದು. ಗೊಜ್ಜೊಂದನ್ನು ಮಾಡಿದಾಗ ಪುಲಿ ಕೊಳಂಬು ಎಂದು ನೆನೆಯುತ್ತಿದ್ದರು. ಆದರೆ ಅವಳು ಬೀಫ್ ಮಿನ್ಸನ್ನು ಸ್ಟಫ್ ಮಾಡಿ ತಯಾರಿಸುತ್ತಿದ್ದ ಹಾಗಲಕಾಯಿ ಫ್ರೈ ಎಂದರೆ ಅವರಿಗೆ ಪ್ರಾಣ. ಅವಳೋ, ತನ್ನನ್ನು ಹಿಂದೊಮ್ಮೆ ಓಕರಿಸುವಂತೆ ಮಾಡಿದ್ದ ಮಾರ್ಮೈಟ್ ಅನ್ನು ಇಷ್ಟ ಪಡಲು ಕಲೆತಳು: ಯಾಕೆಂದರೆ ಮಡ್ರಾಸಿನ ಅವಳ ಗಂಡನ ಮನೆಯಲ್ಲಿ ಈ ಅತಿ ಬ್ರಿಟಿಷ್ ಪದಾರ್ಥವು ಎಲ್ಲರಿಗೂ ಇಷ್ಟ.
ನಮ್ಮಲ್ಲಿ ಅಡುಗೆಯವರಾಗಲಿ ಫುಲ್-ಟೈಮ್ ಕೆಲಸದವರಾಗಲಿ ಇರಲಿಲ್ಲ. 9 ರಿಂದ 5 ದುಡಿಯುತ್ತಿದ್ದ ನನ್ನಮ್ಮ ಮಾತ್ರ, ಮತ್ತು ಅವಳ ಉದಾತ್ತ ಆಕಾಂಕ್ಷೆಗಳು. ಅವಳ ಅಡುಗೆಮನೆಯ ಕಂಪುಗಳು ಎಷ್ಟು ನೆನಪಿವೆ ಎಂದರೆ ಇಂದಿಗೂ ಬೇಸಿಲ್ ಎಲೆಗಳ ಗಂಧ ಎಪ್ಪತ್ತರ ಒಂದು ಸಂಜೆಯನ್ನು ಕಣ್ಣ ಮುಂದೆ ತರುತ್ತದೆ: ನಮ್ಮ ಪುಟ್ಟ ಓವನ್ನಿನಲ್ಲಿ ಅಮ್ಮ ಪಿಜ್ಜಾ ಮಾಡಿದ್ದು, ನನ್ನ ಬೆಸ್ಟ್ ಫ್ರೆಂಡಿನ ಅಣ್ಣ ಮಳೆಯಿಂದ ಮನೆಯೊಳಗೆ ಬಂದಿದ್ದು, ಯೀಸ್ಟ್ ಹಾಕಿ ಹುದುಗು ಬಂದಿದ್ದ ಹಿಟ್ಟು, ಮನೆಯಲ್ಲಿ ಮಾಡಿದ್ದ ಟೊಮಾಟೊ ಸಾಸ್, ಅಮೂಲ್ ಚೀಸ್, ಬೆಂಗಳೂರು ಹ್ಯಾಮ್ ಶಾಪಿನಿಂದ ತಂದಿದ್ದ ಸಾಸೇಜ್ ಮೀಟ್, ಮತ್ತು ಹರಿದ ಬೇಸಿಲ್ ಎಲೆಗಳು. ತಿಂಗಳಿನ ಒಂದು ಭಾನುವಾರ ಸಯೀದಾ-ಬೀ ಎಂದು ನಾವು ಕರೆಯುತ್ತಿದ್ದ ಒಬ್ಬಾಕೆ ದೊಡ್ಡ ಡಬ್ಬಿಯಲ್ಲಿ ಇಡಿಯಪ್ಪಂಗಳನ್ನು ಹಿಡಿದು ಮನೆಯ ಮುಂದೆ ಬರುತ್ತಿದ್ದಳು. ಅಮ್ಮ ಅವುಗಳನ್ನು ಕೊಂಡು ಸಿಹಿಯಾದ ಕಾಯಿಹಾಲಿನ ಜೊತೆ ಬಡಿಸುತ್ತಿದ್ದಳು. ಅವಳು ಅಪ್ಪಂ ಮಾಡಬೇಕೆಂದರೆ ಟಾಡಿ ಬಾಟಲ್ ತರಲು ಅಪ್ಪನನ್ನು ಟಾಡಿ ಮಾಡುವ ಮುತ್ತುವಿನ ಗುಡುಸಿಲಿಗೆ ತಟ್ಟುವುದು. ಅಮ್ಮನ ಅಡುಗೆಗಳಲ್ಲಿ ನನ್ನ ಒಲವುಗಳೆರಡೂ ಸಿಹಿ ಪದಾರ್ಥಗಳು: ಗಸಗಸೆ ಪಾಯಸ-ಪೂರಿ – ಅದು ತರುತ್ತಿದ್ದ ಮಧ್ಯಾಹ್ನದ ನಿದ್ರೆ, ಆ ನಿದ್ರೆಯಲ್ಲಿನ ಅಫೀಮು ಅಮಲಿನ ವಿಸ್ತಾರ ಕನಸುಗಳು – ಹಾಗು ಸರಳ, ಹಿತಕರ ಕೇಸರೀಬಾತ್. ರುಬ್ಬಿದ ಗಸಗಸೆ, ತಾಜಾ ಕಾಯಿಹಾಲು, ಬೆಲ್ಲ ಮತ್ತು ರುಬ್ಬಿದ ಏಲಕ್ಕಿ ಸೇರಿಸಿ ನಯವಾಗಿ ಮಿಶ್ರಣ ಮಾಡಿದ್ದ ಘಮಘಮಿಸುವ ಪಾಯಸ. ಗರಿಗರಿ ಮೈದಾ ಪೂರಿಯನ್ನು ಪಾಯಸದೊಳಗೆ ಮುರಿದು, ತಡಬಡಿಸಿಕೊಂಡು ತಿನ್ನುವುದು: ಆಹಾ, ಇಂದಿಗೂ ಪಾಕತೃಪ್ತಿಯೇ ಅದು.
ಅಮ್ಮನ ಅಡುಗೆಯ ವಾರ್ಷಿಕ ಕ್ಯಾಲೆಂಡರಿನಲ್ಲಿ ದೀಪಾವಳಿಯ ಹಿಂದಿನ ಎರಡು ವಾರಗಳು ವಿಶೇಷವಾಗಿ ಬಿರುಸು: ತಾಳಲಾಗದ ಸಡಗರ ಮತ್ತು ಹುಚ್ಚು ಆಸೆಯ ಸಮಾನ ಬೆರಕೆ. ಅಡುಗೆ ರಾಕ್ಷಸಿಯ ರೀತಿ ಒಂದರ ಮೇಲಿನ್ನೊಂದು ತಯಾರಿಸುತ್ತಾ ಒಲೆಯ ಮುಂದಿರುತ್ತಿದ್ದಳು ಅಮ್ಮ. ಡಬ್ಬಿ ಡಬ್ಬಿಗಳ ಪೂರ್ತಿ ಸಿಹಿ ತಿನಿಸುಗಳು: ಕಜ್ಜಾಯ, ಕೊಬ್ಬರಿ ಮಿಠಾಯಿ, ಗುಲಾಬ್ ಜಾಮೂನ್. ಮತ್ತು ಖಾರಕ್ಕೆ ಕೊಡುಬಳೆ, ಚಕ್ಕುಲಿ, ಖಾರದ ಕಡ್ಡಿ – ಮತ್ತೂ ಅವಲಕ್ಕಿ, ಬೆಳ್ಳುಳಿ, ಕೆಂಪು ಮೆಣಸಿನಕಾಯಿ, ಕೊಬ್ಬರಿ ಚೂರು, ಒಣದ್ರಾಕ್ಷಿ, ಗೋಡಂಬಿ, ಹಾಗು ಕರಿಬೇವು ಸೊಪ್ಪು ಸೇರಿಸಿದ ಅತ್ಯುನ್ನತ ಮಿಕ್ಸ್ಚರ್. ಇಷ್ಟೆಲ್ಲಾ ತಯಾರಿದ್ದರೂ, ದೀಪಾವಳಿಯ ಬೆಳಿಗ್ಗೆ ನಮ್ಮೆಲ್ಲರ ಎಣ್ಣೆ ಸ್ನಾನದ ನಂತರ ಅಮ್ಮ ದೀಪ ಹಚ್ಚುವವರೆಗೂ ಮಕ್ಕಳ ಕೈಗಳು ಈ ಸಂಪತ್ತಿನತ್ತ ಸುಳಿಯದಿರದ ಹಾಗೆ ಮನೆಯಲ್ಲಿ ಮಾತು ತೆಗೆದುಕೊಳ್ಳುತ್ತಿದ್ದರು – ಉಹೂನ್, ಕಿರುಕುಳ ಕೊಡುತ್ತಿದ್ದರು.
ಅಪ್ಪ-ಅಮ್ಮ ಬೆಂಗಳೂರು ಬ್ಲೂ ದ್ರಾಕ್ಷಿಗಳನ್ನು ಸಗಟು ಖರೀದಿಸಿ ಮನೆಯಲ್ಲಿ ವೈನ್ ಮಾಡುವ ಬಗೆಯನ್ನು ನಾನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೇನೆ: ಅದರಲ್ಲಿನ ಲಘುವಾದ ಪ್ರಣಯ, ತಾಳಲಾರದ ಮುದವೇ ಬೇರೆ. ತಮ್ಮ ಬಿಳಿ-ಹಳದಿ ಸ್ಟ್ಯಾಂಡರ್ಡ್ ಹೆರಲ್ಡ್ ಕಾರಿನಲ್ಲಿ ಕೆಂಪು ಪ್ಲಾಸ್ಟಿಕ್ ಬಾತ್-ಟಬ್ಬನ್ನು ಹೇರಿಸಿ ನಂದಿ ಬೆಟ್ಟಗಳ ಆಸುಪಾಸಿನ ದ್ರಾಕ್ಷಿ ತೋಟಕ್ಕೆ ಹೋಗುವರು. ವಾಪಸ್ ಬಂದಾಗ ಟಬ್ ತುಂಬಾ ಬೆಂಗಳೂರು ಬ್ಲೂಗಳು. ಮನೆಯ ಆ ಸಿಮೆಂಟ್ ಸಿಂಕಿನಲ್ಲಿ ಅವುಗಳನ್ನು ನೆನೆಸಿ, ಅವುಗಳ ರಸ ತೆಗೆದು, ಎರಡು ದೊಡ್ಡ ಪಿಂಗಾಣಿ ಉಪ್ಪಿನಕಾಯಿ ಜಾಡಿಗಳಲ್ಲಿ ಹಾಕಿ ಹುದುಗು ಬರಲು ಬಿಡುವುದು. ಕ್ರಿಸ್ಮಸ್ ಬರುವ ಹೊತ್ತಿಗೆ ವೈನನ್ನು ಮೆಲ್ಲಗೆ ಎರೆದು ಪುಟ್ಟ ಗ್ಲಾಸ್ ಲೋಟಗಳಲ್ಲಿ ಸರ್ವ್ ಮಾಡುವುದು.
ನಮ್ಮ ಮನೆಯ ಅಡುಗೆಯ ಸಂಗಮಗಳ ನಕ್ಷೆಯನ್ನು ಬರೆದರೆ, ಅದರಲ್ಲಿ ಕ್ವೆಟ್ಟಾದಿಂದ ಬನಾರಸ್ಸಿಗೆ, ಬನಾರಸ್ಸಿನಿಂದ ಮಡ್ರಾಸಿಗೆ ಹರಿಯುವ ಹೊಳೆಯೊಂದು ಕಾಣಿಸುತ್ತದೆ. ಇನ್ನೊಂದು ಹೈದರಾಬಾದಿನಿಂದ ಮಂಗಳೂರಿಗೆ, ಅಲ್ಲಿಂದ ಮುಂದೆ ಬೆಂಗಳೂರಿಗೆ. ಮೂರನೆಯದ್ದೊಂದು ಮಡ್ರಾಸಿನಿಂದ ಬೆಂಗಳೂರು ಕಂಟೋನ್ಮೆಂಟಿಗೆ. ಕಾಲಕಾಲಕ್ಕೆ ಭೇಟಿ ನೀಡುವ ಉಪನದಿಗಳು ಕೂಡ ಕಾಣಿಸುತ್ತವೆ. ಒಂದು ಮಡ್ರಾಸಿನ ರಾಯಪೆಟ್ಟಾದ ರೈಲ್ವೆ ಚಿಕನ್ ಕರ್ರಿ ಮತ್ತು ಡೆವಿಲ್ ಚಟ್ನಿಯನ್ನು ಹೊತ್ತಿ ತರುತ್ತದೆ. ಇನ್ನೊಂದು ಕುವಾಲ ಲುಂಪುರದಿಂದ ಯು. ಕೆ. ಮೂಲಕ ಭಾರತಕ್ಕೆ ಸಮುದ್ರಯಾನ ಮತ್ತು ಸಾಹಸ ಕತೆಗಳ ಜೊತೆ ಜ್ಯಾಮ್ ತಯಾರಿಸುವ ಕೌಶಲ್ಯಗಳನ್ನು ತರುತ್ತದೆ. ಮಗದೊಂದು ಆಸ್ಟ್ರೇಲಿಯಾದ ಪೋರ್ಟ್ ಫೇರಿ ಕಡೆಯಿಂದ ಬಂದು, ಇದ್ದಲ ಮೇಲೆ ಡ್ಯಾಂಪರ್ ಬ್ರೆಡ್ಡನ್ನು ಬೇಕ್ ಮಾಡುವ ವಿಧಾನವನ್ನು ತೋರಿಸಿಕೊಡುತ್ತದೆ: ಅಮ್ಮ ಸಾಸೇಜ್ ಗ್ರಿಲ್ ಮಾಡುತ್ತಿದ್ದ ಬಾರ್ಬೆಕ್ಯೂವನ್ನು ತಾನೇ ಕಟ್ಟಿ ನಿರ್ಮಿಸಲು ಅಪ್ಪನಿಗೆ ಈ ಇದ್ದಲು-ಬೇಕಿಂಗ್ ವಿಧಾನವೇ ಪ್ರೇರಣೆ ನೀಡಿದ್ದು ಅನಿಸುತ್ತದೆ. ಬಾಂಬೆಯಿಂದ ತಾಳೀಪೀಟ್, ಶ್ರೀಖಂಡ, ಬೆಳ್ಳುಳ್ಳಿ ಹೂವಿನ ಚಟ್ನಿಯ ಕತೆಗಳು; ಮಲ್ಲೇಶ್ವರಂನಿಂದ ಅಯ್ಯಂಗಾರಿ ಸಾರುಗಳು, ಈರುಳ್ಳಿ ಹಾಕದ ಕೆಂಪು ಚಟ್ನಿ ಮತ್ತು ಹಿಂಗಿನ ಜೊತೆ ತಿನ್ನುವ ಅಕ್ಕಿ ರೊಟ್ಟಿ. ಅಮ್ಮನ ಕೊನೆಯ ತಂಗಿ ಅಮೆರಿಕಾ ಸೇರಿದ ಮೇಲೆ ಕಾಮಿಕ್ ಪುಸ್ತಕಗಳ ಮೂಲಕ ಮಾತ್ರ ತಿಳಿದಿದ್ದ ಕೆಲವು ಅಡುಗೆಗಳ ಬಗ್ಗೆ ಹೆಚ್ಚು ಗೊತ್ತಾಯಿತು: ಪಿಲ್ಲಡೆಲ್ಫಿಯಾ ಚೀಸ್ ಕೇಕ್ ಮತ್ತು ಬ್ರೌನಿಗಳು. ಇವುಗಳ ಬಗ್ಗೆ ತಿಳಿದ ಮೇಲೆ ಅಮ್ಮ ನಮ್ಮ ಕಿರಿದಾದ ಸಿಮೆಂಟ್ ಸಿಂಕಿನ ಅಡುಗೆಮನೆಯಲ್ಲಿ ಎರಡನ್ನೂ ಮರುಸೃಷ್ಟಿಸಿದಳೂ ಕೂಡ.
Photo Credit – Avanija Reddy
ಇಲ್ಲಿ ನಾವು ಮಾತನಾಡುತ್ತಿರುವ ವಿಷಯ ಅಡುಗೆಯನ್ನು ಮೀರಿದ್ದು. ಸ್ವಾತಂತ್ರ್ಯದ ನಂತರದ ಯುಗಧರ್ಮ ಎಂದು ಹೇಳಬಹುದು, ಆದರೆ ನಿಜವಾಗಿಯೂ ಜಾತಿಯ ಮಡಿವಂತಿಕೆ ಮತ್ತು ಅದರ ಪ್ರಬಲವಾದ ಶುದ್ಧ-ಅಶುದ್ಧ ಸಿದ್ದಾಂತಗಳ ಬೇಡಿಗಳನ್ನು ದಿಕ್ಕರಿಸಿ ಒಡೆದ ಪಾಕ ಸಂಸ್ಕೃತಿ ಇದು. ಇಂದಿನ ದಿನಗಳಲ್ಲಿ, ಭಾರತದ ಮೆಟ್ರೋ ಊರುಗಳಲ್ಲಂತೂ, ಬಹುತೇಕ ಎಲ್ಲರಿಗೂ ಅಂತರರಾಷ್ಟ್ರೀಯತೆಯನ್ನು ಪ್ರವೇಶಿಸಲು ಹಲವಾರು ದಾರಿಗಳಿವೆ: ಅವುಗಳಲ್ಲಿ ಒಂದು ಅಡುಗೆ ಸೇವೆಗಳ ವಿಸ್ಫೋಟವೆಂದೇ ಹೇಳಬಹುದು. ಆದರೆ ಅದು ಕೊಳ್ಳುಬಾಕ ಸಂಸ್ಕೃತಿಯ ಚೌಕಟ್ಟಿನೊಳಗೆ ಸೇರಿದ್ದು; ಜಾಗತೀಕರಣಗೊಂಡಿರುವ ರಾಜ್ಯದ ಅವಶೇಷವೂ ಹೌದು. ಆದರೆ ಇಲ್ಲಿ: ನಾಲಿಗೆಯ ಕೌತುಕದ ಪ್ರಚೋದನೆ, ಕೈಗೆ ಬಂದ ಹೊಸ-ಹಳೆ ರೆಸಿಪಿಗಳು, ಹಾಗು ಕುಟುಂಬಗಳ ಬೆರಕೆಯೊಳಗಿನಿಂದ ಸಿಗುವ ಸಂಪ್ರದಾಯಗಳು – ಇವುಗಳ ಪ್ರೇರಣೆಯಿಂದ ಬೆಳೆಯುವ ತೊಡಗುವಿಕೆ ಇದು. ಅಪರಿಚಿತ ಸಾಮಾಗ್ರಿಗಳು ಮತ್ತು ಪರಕೀಯ ಪಾಕಪದ್ದತಿಗಳಲ್ಲಿ ತೊಡಗಿಸಿಕೊಳ್ಳುವ ತೀವ್ರತೆಗೆ ಗ್ರಾಹಕ ಮನಸ್ಥಿತಿ ಸಾಲದು. ಅಡುಗೆ ಮಾಡುವವರ, ಅಡುಗೆಯ, ಮತ್ತು ತಿನ್ನುವವರ ಮಧ್ಯದ ಸಂಬಂಧದ ಕುರಿತು ಗಾಢವಾದ ಆಸಕ್ತಿ ಇರಬೇಕು. ಚೇ ಗೆವಾರನ ಚಿತ್ರವಿರುವ ಟಿ-ಶರ್ಟ್ ಧರಿಸಿದ ಮಾತ್ರಕ್ಕೆ ನಾವು ಕ್ರಾಂತಿಕಾರಿಗಳಾಗುತ್ತೇವೆಯೇ? ಬೆವರು, ರಕ್ತ, ಕಣ್ಣೀರು ಸುರಿಸಿ ತೆರಿಗೆ ಕಟ್ಟಬೇಕಲ್ಲವೇ? ಇವೆಲ್ಲವನ್ನು ಮಾಂಸಾಹಾರದ ರಾಜಕೀಯ ಇನ್ನೂ ಸಂಕೀರ್ಣಗೊಳಿಸುತ್ತದೆ. ಮಾಂಸ ಯಾರಿಗೆ ಲಭ್ಯ? ಯಾವ ಪ್ರಾಣಿಗಳನ್ನು ಯಾರು ತಿನ್ನುತ್ತಾರೆ, ಮತ್ತು ಯಾವ ಭಾಗಗಳನ್ನು ಯಾರು ತಿನ್ನುತ್ತಾರೆ? ಅಪ್ಪನ ತಂದೆ ತಾಯಿ ಸಸ್ಯಹಾರಿಗಳು: ಹುಟ್ಟಿನಿಂದಲ್ಲ, ಸಿದ್ಧಾಂತಗಳಿಂದ. ಅಮ್ಮನವರು ಮಾಂಸಾಹಾರಿಗಳು, ಆದರೆ ಹಸು ಮತ್ತು ಹಂದಿಮಾಂಸ ಅವರ ಅಡುಗೆಮನೆಯಲ್ಲಿ ಅಪರಿಚಿತ ಪದಾರ್ಥಗಳು. ಅದೇ ಅಪ್ಪ ಮತ್ತು ಅಮ್ಮ ಮದುವೆಯಾದಂತೆ ಅವರ ಅಡುಗೆಮನೆ ಹಲವಾರು ಬಿಡಿ ಭಾಗಗಳ ಮೊತ್ತಾಂಶವಾಯಿತು. ಹೊಸದಾಗಿ ಸ್ವಾತಂತ್ರ್ಯ ಪಡೆದ ದೇಶದ ಹಾಗೆ ಹೊಸ ಅನುಭವಗಳ ಬೆರಗಿಗೆ ತೆರೆದ, ಮುಕ್ತ ಅಡುಗೆಮನೆ. ಬೇಕಾದನ್ನು ಆರಿಸಿಕೊಂಡು ಸವಿಯಲು ಸಾಧ್ಯವಿದ್ದ ಅಡುಗೆ ಮನೆ.
ಮಾನವ ಶಾಸ್ತ್ರಜ್ಞರಾದ ಅರ್ಜುನ ಅಪ್ಪಾದುರೈ ಸಮಕಾಲಿನ ಭಾರತದ ಅಡುಗೆ ಪುಸ್ತಕಗಳ ಬಗ್ಗೆ ಹೀಗೆ ಬರೆಯುತ್ತಾರೆ: ‘ಯೋಗ್ಯತೆಯ ಎಲ್ಲೆಗಳು, ಪಾಕ ಪದ್ದತಿಗಳ ಔಚಿತ್ಯತೆಗಳು, ಆಹಾರದ ತರ್ಕಗಳು, ಮನೆಯ ಬಜೆಟಿನ ತುರ್ತುವೆಚ್ಚಗಳು, ಮಾರ್ಕೆಟ್ ಪ್ರವೃತ್ತಿಗಳು, ಮತ್ತು ಕುಟುಮ್ಬದ ಸಿದ್ಧಾಂತಗಳು – ಇವೆಲ್ಲದರ ಬದಲಾವಣೆಗಳನ್ನು ಈ ಅಡುಗೆ ಪುಸ್ತಕಗಳು ಪ್ರತಿಬಿಂಬಿಸುತ್ತದೆ.’ ಇವೆಲ್ಲವು ಅಮ್ಮನ ಅಡುಗೆಗೂ ಅನ್ವಯವಾದದ್ದು. ತನ್ನ 50 ವರ್ಷಗಳ ಸಾಂಸಾರಿಕ ಜೀವನದಲ್ಲಿ ತನ್ನ ಸರಹದ್ದುಗಳನ್ನೂ ತನ್ನ ಗುರುತುಗಳನ್ನೂ ಸರಿಸಿಕೊಳ್ಳುತ್ತಾ ಬದಲಾಯಿಸಿಕೊಳ್ಳುತ್ತಾ ತಾನೇ ನಿರ್ಮಿಸಿಕೊಂಡ ಸಿದ್ದಾಂತಗಳೆಡೆಗೆ, ತನ್ನ ಕೃತಿಯೇ ಆದ ಜೀವನದೆಡೆಗೆ ದಾರಿಯೊಂದನ್ನು ಕಲ್ಪಿಸಿಕೊಂಡಳು.
ಅವಳ ಅಡುಗೆಯ ಬಗ್ಗೆ ಮೆಚ್ಚುಗೆಗಳನ್ನು ಸೂಚಿಸದೇ ಹೋಗುವುದಕ್ಕೆ ಅಪ್ಪ ಈಗಿಲ್ಲ. ಆದರೆ ಈಗ 78ರಲ್ಲೂ ಅವರಿಗೇ ಬಡಿಸುತ್ತಿರುವ ಹಾಗೆ ಅಡುಗೆ ಮಾಡುತ್ತಾಳೆ. ಇತ್ತೀಚಿಗೊಮ್ಮೆ ಹೇಳುತ್ತಿದ್ದಳು: ‘ಶುಕ್ರವಾರ ಪಪ್ಪಾಗೆ ಪಿಜ್ಜಾ ಇಷ್ಟ, ಹಾಗಾಗಿ ಅವತ್ತು ನನ್ನ ಬೇಕಿಂಗ್ ದಿನ.’ ಆ ದಿನ, ಮೊಳಕೆ ಕಾಳುಗಳನ್ನೋ ಅಥವಾ ಹೊಸ ಬೀಜಗಳನ್ನೋ ಅಥವಾ ಗೆಣಸನ್ನೋ ಹಾಕಿ ತರಾವರಿ ಬ್ರೆಡ್ಡುಗಳನ್ನು, ಮಸಾಲೆ ಬನ್ನುಗಳನ್ನು, ಸ್ಪ್ಯಾನಿಶ್ ಆರೆಂಜ್ ಮತ್ತು ಬಾದಾಮಿಗಳನ್ನು ಹಾಕಿದ ಕೇಕನ್ನು – ಹೀಗೆ ಹಲವಾರು ಆವಿಷ್ಕಾರಗಳನ್ನು ಮಾಡುತ್ತಿದ್ದಳು. ನಾನು ಬರುತ್ತಿದ್ದೇನೆ ಎಂದು ತಿಳಿದರೆ ಸಾಕು, ತನ್ನ ಪೆಸ್ಕಿಟೇರಿಯನ್ – ಮೀನು ತಿನ್ನುವ, ಬೇರೆ ಮಾಂಸ ತಿನ್ನದ – ಮಗಳಿಗೆ ಸೀಫುಡ್ ತಯಾರಿಸಿಯೇ ಇರುತ್ತಾಳೆ. ಇತ್ತೀಚಿಗೆ ನಾನವಳಲ್ಲಿಗೆ ಹೋದಾಗ ಟೇಬಲ್ ಮೇಲೆ ಇವೆಲ್ಲವನ್ನು ಹರಡಿದ್ದಳು:
ಯೆಟ್ಟಿ ದ ಉಪ್ಕರಿ: ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಕರಿಬೇವು, ಮತ್ತು ತಾಜಾ ಕಾಯಿತುರಿಯ ಜೊತೆ ಮಾಡಿದ ಪ್ರಾನ್ ಸೀಗಡಿ ಮೀನು.
ತೌತೇ ಕೊದ್ದೇಲ್: ಬಿಸಿ ಅನ್ನದ ಜೊತೆ ತಿನ್ನುವ ಮಂಗಳೂರು ಸೌತೆಯ ಕರ್ರಿ.
ಲತ್ತನೆ ಉಪ್ಕರಿ: ಸಾಸಿವೆ, ಬೆಳ್ಳುಳ್ಳಿ ಚೂರು, ಮತ್ತು ಕಾಯಿತುರಿಯ ಒಗ್ಗರಣೆ ಹಾಕಿದ ಅಲಸಂದೆ (ಲಾಂಗ್ ಬೀನ್ಸ್) ಸ್ಟರ್ ಫ್ರೈ. ಇದಕ್ಕೆ ಟೊಮಾಟೋ, ಸೌತೇಕಾಯಿ, ಬೆಣ್ಣೆಹಣ್ಣು (ಅವಕಾಡೋ), ದೊಡ್ಡಮೆಣಸಿನಕಾಯಿ, ಹೆಚ್ಚಿದ ಬೇಸಿಲ್ ಎಲೆಗಳು, ಮೊಳಕೆ ಕಾಳುಗಳು, ಮತ್ತು ವಿನಾಯಿಗ್ರೆಟ್ ಸಾಸ್ ಹಾಕಿದ ಸಲಾಡ್.
ಹಾಗು ತಿಂಡಿಗೆ: ಅವಳು ಮಾಡಿದ್ದ ಸಿನಮನ್ ರೋಲ್ಸ್ ಮತ್ತು ಕಾಫಿ.
ಅನುವಾದಕ ವಿಘ್ನೇಶ್ ಹಂಪಾಪುರ ಅವರ ಧ್ವನಿಯಲ್ಲಿನ ಪ್ರಬಂಧವನ್ನು ನೀವು ಇಲ್ಲಿ ಕೇಳಬಹುದು –