ದಾದರಿಯಲ್ಲಿ ಸೊಪ್ಪಿನ ಕೊಯ್ಲು: ಸಂಪ್ರದಾಯ ಸುಸ್ಥಿರತೆಯ ದಾರಿಯಾದಾಗ
Volume 3 | Issue 12 [April 2024]

ದಾದರಿಯಲ್ಲಿ ಸೊಪ್ಪಿನ ಕೊಯ್ಲು: ಸಂಪ್ರದಾಯ ಸುಸ್ಥಿರತೆಯ ದಾರಿಯಾದಾಗ <br>Volume 3 | Issue 12 [April 2024]

ದಾದರಿಯಲ್ಲಿ ಸೊಪ್ಪಿನ ಕೊಯ್ಲು: ಸಂಪ್ರದಾಯ ಸುಸ್ಥಿರತೆಯ ದಾರಿಯಾದಾಗ

ತನಿಶ್ಕಾ ವೈಶ್

Volume 3 | Issue 12 [April 2024]

ಕನ್ನಡಕ್ಕೆ: ಗುರುಪ್ರಸಾದ್ ಡಿ ಎನ್

ರುಚಿ ಸಂಪೂರ್ಣವಾಗಿ ಬದಲಾಗಿದೆ. ಈಗ ತರಕಾರಿ ಬೆಳೆಯಲು ಔಷಧಗಳನ್ನು ಬಳಸುತ್ತಾರೆ”

ನಾನು ಬೆಳೆಯುವಾಗ, 2000ದ ಆಸುಪಾಸಿನ ಸಮಯದ ಚಳಿಗಾಲಗಳಲ್ಲಿ ಅಮ್ಮ ಮಾಡುತ್ತಿದ್ದ ಮಕ್ಕಿ ಕಿ ರೋಟಿ (ಜೋಳದ ರೊಟ್ಟಿ) ಮತ್ತು ಸಾಗ್ (ಗೊಜ್ಜು ಅಥವಾ ಸಾಗು) ಬಗ್ಗೆ ನನ್ನ ಅಜ್ಜಿ ಗೊಣಗಾಡುತ್ತಿದ್ದುದನ್ನು ಅರ್ಥ ಮಾಡಿಕೊಳ್ಳಲು ನನಗೆ ಅಷ್ಟು ಸಾಧ್ಯವಾಗುತ್ತಲೇ ಇರಲಿಲ್ಲ. ನನಗೆ, ಸಾಗ್ ಮತ್ತು ಆದರ ಜೋಡಿ ಇರುತ್ತಿದ್ದ ಬೇಕಾದಷ್ಟು ಬಿಳಿ ಬೆಣ್ಣೆ ಸ್ವರ್ಗದಂತಿರುತ್ತಿತ್ತು. ವಿವಿಧ ಕಾಳುಗಳು ಮತ್ತು ತರಕಾರಿಗಳಲ್ಲಿ ಆಗಿರುವ ರುಚಿ ಬದಲಾವಣೆಗಳು ನನ್ನ ಗ್ರಹಿಕೆಗೆ ಸಿಗದ ಸಂಗತಿಗಳಾಗಿದ್ದವು, ಮತ್ತು ಇತ್ತೀಚೆಗಷ್ಟೇ ನಾನು ತಿನ್ನುವ ಆಹಾರದ ಸ್ವಾದವನ್ನು ತಿಳಿದು ಆಸ್ವಾದಿಸಲು ಕಲಿತದ್ದು. ಸಾಮಾನ್ಯವಾಗಿ ಮನೆಯಲ್ಲಿ ಚಳಿಗಾಲದ ಮಾತುಕತೆಗಳು, ಕಾಳುಗಳು ಕಲಬೆರೆಕೆಯಾಗಿವೆ ಎಂಬ ಆರೋಪದ ಬಗ್ಗೆ, ಕೀಟನಾಶಕಗಳ ಬಳಕೆಯ ಬಗ್ಗೆ, ಮತ್ತು ಅತ್ಯುತ್ತಮ ಸ್ವಾದಗಳಿಗೆ ಹೆದ್ದಾರಿಯೆಂದರೆ ಹಳ್ಳಿ ಜೀವನ ಎಂದು ನನ್ನ ಅಜ್ಜಿ ಸಲಹೆ ನೀಡುವುದರ ಸುತ್ತ ಸುತ್ತುತ್ತಿದ್ದವು. ಸುತ್ತಮುತ್ತಲಿನ ಕೆರೆಗಳ ಹತ್ತಿರ ತಾಜಾ ಇಳುವರಿಯನ್ನು ತೆಗೆದುಕೊಳ್ಳುವುದಕ್ಕೆ ನೆರೆಹೊರೆಯವರ ಜತೆಗೆ ತೆರಳುತ್ತಿದ್ದ ಮತ್ತು ಟನ್‌ಗಟ್ಟಲೆ ಮಸಾಲೆ ಬೇಡದ ಸ್ವಾದಿಷ್ಟ ಸಾಗ್ ಅನ್ನು ತಯಾರಿಸುತ್ತಿದ್ದ ಕಥೆಗಳನ್ನು ಅಜ್ಜಿ ನೆನಪಿನಿಂದ ಹೆಕ್ಕಿ ಹೇಳುತ್ತಿದ್ದರು. ನಗರದ ಹುಡುಗಿಯಾಗಿದ್ದ ನನಗೆ, ಈ ಕಥೆಗಳು ಯಾವುದೋ ವಿದೇಶದವು ಅನ್ನಿಸುತ್ತಿತ್ತು, ಮತ್ತು ವರ್ಷ ಪೂರ್ತಿ ಮಾರುಕಟ್ಟೆಯಲ್ಲಿ ಸಿಗುವ, ಅಸ್ವಾಭಾವಿಕವಾಗಿ ಸಿಹಿಯಿರುವ ಕಲ್ಲಂಗಡಿ ಹಣ್ಣುಗಳನ್ನ ಕಂಡ ನಂತರ, ಹಣ್ಣುಗಳ ಬಗ್ಗೆ ನನಗೇ ಈ ಜ್ಞಾನೋದಯವಾಗುವ ಮೊದಲು ಅಜ್ಜಿಯ ಗೊಣಗುವಿಕೆಯನ್ನು ಅರ್ಥ ಮಾಡಿಕೊಳ್ಳಲು ಹೆಣಗಾಡುತ್ತಿದ್ದೆ.

ಶಿವ್ ನಾದರ್ ಇನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ನಲ್ಲಿ ನಾನು ಪದವಿ ಶಿಕ್ಷಣಕ್ಕಾಗಿ ಬಂದಾಗ, ವಿಶ್ವವಿದ್ಯಾಲಯದ ಒಳಗಿನ ಮತ್ತು ಹೊರಗಿನ ಜಗತ್ತುಗಳ ನಡುವೆ ಧ್ರುವಗಳ ಅಂತರವಿರಲಿದೆ ಎಂದು ನಾನೆಂದೂ ಕಲ್ಪಿಸಿಕೊಂಡಿರಲಿಲ್ಲ. ಒಂದು ಪ್ರಾಚೀನ ಹಳ್ಳಿಯಾದ ದಾದರಿಯಲ್ಲಿ ಗೂಡು ಕಟ್ಟಿಕೊಂಡಿರುವ ನನ್ನ ವಿಶ್ವವಿದ್ಯಾಲಯ, ಸಿರಿ ಹಸುರಿನ ಹೊದಿಕೆಯೊಂದಿದಿಗೆ ಎಲ್ಲಿಯೂ ಸಿಗದ ನೆಮ್ಮದಿಯನ್ನು ಕೊಡುತ್ತದೆ. ದಾದರಿ ಉತ್ತರ ಪ್ರದೇಶದ ಒಂದು ಹಳ್ಳಿ ಮತ್ತು ದೆಹಲಿ ಎನ್ ಸಿ ಆರ್ ಪ್ರದೇಶಕ್ಕೆ ಹತ್ತಿರವಿದ್ದು, ಅದು ಹೆಚ್ಚಾಗಿ ಗುಜ್ಜಾರ್ ಸಮುದಾಯ ನೆಲೆಸಿರುವ ಪ್ರದೇಶವಾಗಿದೆ. ಇದು ಜೌಗು ಪ್ರದೇಶವಾಗಿದೆ; ಆದುದರಿಂದ, ಹತ್ತಿರ ನಗರಗಳಿಗೆ ಬೇಕಾಗುವ ಹೆಚ್ಚಿನ ತರಕಾರಿ-ಸೊಪ್ಪು ಪದಾರ್ಥಗಳನ್ನು ಇಲ್ಲಿ ಬೆಳೆಯಲಾಗುತ್ತದೆ, ಮತ್ತು ನಾನು ವಿದ್ಯಾರ್ಥಿಯಾಗಿ ಇಲ್ಲಿದ್ದ ಕೆಲವು ವರ್ಷಗಳಲ್ಲಿ, ಅಲ್ಲಿ ಆ ಪದಾರ್ಥಗಳನ್ನು ಬೆಳೆಯುವ ವಿಧಾನ ಕಣ್ಣಿಗೆ ಕಾಣುವಷ್ಟು ಬದಲಾಗಿದೆ. ಉತ್ತರ ಭಾರತದ ದಿನನಿತ್ಯದ ಊಟದಲ್ಲಿ ಸರ್ವೇಸಾಮಾನ್ಯವಾದ ತರಕಾರಿಗಳನ್ನು ಇಲ್ಲಿ ಬೆಳೆಯಲಾಗುತ್ತದೆ, ಮತ್ತು ಈ ಹಳ್ಳಿ ಸಿಹಿಯಾದ ಕ್ಯಾರೆಟ್ ಗಳಿಗೆ ಮತ್ತು ಕಿತ್ತಳೆ ಹಣ್ಣುಗಳಿಗೂ ಪ್ರಸಿದ್ಧಿ. ಹತ್ತಿರದ ದಾಭಾಗಳಲ್ಲಿ, ದೊಡ್ಡ ಪರಾಟಾಗಳು ಮತ್ತದರ ಜತೆಗೆ ಹಲವು ಬಗೆಯ ಸೊಪ್ಪುಗಳು, ತಾಜಾ ಟಮೋಟೋ ಮತ್ತು ಇತರ ಹಣ್ಣುಗಳಿಂದಲೂ ಮಾಡಿದ ಹಲವು ಬಗೆಯ ಚಟ್ನಿಗಳು ನಿಮಗೆ ಸಿಗುತ್ತವೆ. ಈ ನಗರದ ಮುಖ್ಯ ಉದ್ಯೋಗ ಕೃಷಿಯಾಗಿತ್ತು; ಇಲ್ಲಿ ಬೆಳೆದ ಉತ್ಪನ್ನ ಉತ್ಕೃಷ್ಟವಾದ ತಾಜಾತನದಿಂದ ಮತ್ತು ಪೌಷ್ಟಿಕಾಂಶಗಳಿಂದ ಕೂಡಿರುತ್ತಿತ್ತು. ಆದರೆ, ಬದಲಾವಣೆಯ ಗಾಳಿ ಬೀಸಿ, ಕಳೆದ ಒಂದು ದಶಕದಲ್ಲಿ  ಈ ಪ್ರದೇಶವನ್ನು ಇನ್ನಿಲ್ಲದಂತೆ ಬದಲಾಯಿಸಿದ್ದು, ದಾದರಿಯನ್ನು ನೈಸರ್ಗಿಕ ಕೃಷಿಯ ತಾಣದಿಂದ, ಹತ್ತಿರದ ಮೆಟ್ರೋಪಾಲಿಟನ್ ನಗರಗಳ ತಣಿಯದ ಬೇಡಿಕೆಗಳನ್ನು ಪೂರೈಸುವ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಪ್ರದೇಶವನ್ನಾಗಿ ತಿರುಗಿಸಲಾಗಿದೆ. ದಾದರಿಯಲ್ಲಿ ಬೆಳೆಯುವ ಬಹುತೇಕ ಉತ್ಪನ್ನಗಳು ಒಂದೋ ಕೀಟನಾಶಕಗಳಿಂದ ತುಂಬಿರುತ್ತವೆ ಅಥವಾ ಹೈಬ್ರಿಡ್ ತಳಿಗಳಿಂದ ಬಂದವಾಗಿರುತ್ತವೆ. ಇದು, ಕಲಬೆರೆಕೆಯಲ್ಲದ್ದನ್ನು ಮತ್ತು ಆರೋಗ್ಯಕಾರಿಯಾದ ಉತ್ಪನ್ನಗಳನ್ನು ತಿನ್ನುತ್ತಿದ್ದ ಹಳ್ಳಿಯ ಜನರ ಮೇಲೆ ಗಂಭೀರ ಪರಿಣಾಮ ಬೀರಿದೆ. ಹಲವು ಪೀಳಿಗೆಗಳಿಂದ ಇಲ್ಲಿ ಬದುಕುತ್ತಿರುವ ಕುಟುಂಬಗಳು ಈ ಸಮಸ್ಯೆಯನ್ನು ಗುರುತಿಸಿದ್ದು ಅವರು ಈಗ ತಮ್ಮ ಮನೆಗಳಲ್ಲಿಯೇ ಅವರಿಗೆ ಬೇಕಾದ ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸಿದ್ದಾರೆ ಅಥವಾ ಪ್ರಾದೇಶಿಕವಾಗಿ ಸಿಗುವ ಉತ್ಪನ್ನಗಳ ಕೊಯ್ಲಿಗೆ ಮುಂದಾಗಿದ್ದಾರೆ.

ಕಲಬೆರಕೆಯಿಲ್ಲದೆ ಸುಸ್ಥಿರತೆಯ ಕಡೆಗಿನ ಈ ಹೋರಾಟದಲ್ಲಿ, ದಾದರಿಯ ಮಹಿಳೆಯರಿಗೆ, ಕೊಯ್ಲಿಗೆ ಹೋಗುವುದು ಪರಂಪರೆಯ ಮತ್ತು ಪೌಷ್ಟಿಕಾಂಶಗಳ ಅವಶ್ಯಕತೆಯ ಬೆಳಕಿನ ಮಾರ್ಗವಾಗಿ ಹೊರಹೊಮ್ಮಿದೆ. ಸಾಮಾಜಿಕ ಮಾಧ್ಯಮಗಳು ಕೊಯ್ಲಿಗೆ ಹೋಗುವುದನ್ನು ಈ ಸಮಯದ ಟ್ರೆಂಡ್ ಎಂದು ಉತ್ಪ್ರೇಕ್ಷಿಸುತ್ತವಾದರೂ, ಇದು ಭಾರತದ ಸಂಸ್ಕೃತಿಯಲ್ಲಿ ಬೇರುಬಿಟ್ಟಿರುವ ಬಹಳ ಹಳೆಯ ಅಭ್ಯಾಸ. ದಾದರಿಯ ಮಹಿಳೆಯರಿಗೆ, ಕೊಯ್ಲಿಗೆ ಹೋಗುವುದು ಕೇವಲ ಆಹಾರ ಉತ್ಪನ್ನವನ್ನು ಪಡೆಯುವ ಮಾರ್ಗ ಮಾತ್ರವಲ್ಲ; ಅದು ಸಂಪ್ರದಾಯ, ಬಾಂಧವ್ಯ ಸಾಧಿಸುವ ಅನುಭವ, ಮತ್ತು ಅಡುಗೆಮನೆಯ ಬಂಧನದಾಚೆ ಪ್ರಕೃತಿಯ ಜತೆಗೆ ಸಾಧಿಸುವ ಸಂಪರ್ಕ. ದಾದರಿಗೆ ಭೇಟಿ ನೀಡಿದ ಒಂದು ಸಂದರ್ಭದಲ್ಲಿ, ಒಬ್ಬ ಮಹಿಳೆ ನೆಲದಿಂದ ಕಳೆಯನ್ನು ಎತ್ತಿಕೊಳ್ಳುತ್ತಿದ್ದನ್ನು ನಾನು ಗಮನಿಸಿದೆ. ನಾನು ಎಂದಾದರೂ ತಿಂದಿರುವ ತರಕಾರಿಯಂತೆ ಅದು ಕಾಣಲಿಲ್ಲ, ಆದರೆ ಅದೇನೆಂದು ತಿಳಿದುಕೊಳ್ಳುವ ಕುತೂಹಲವಿತ್ತು. ಆ ಹಳ್ಳಿಯ ಮಹಿಳೆಯರ ಜತೆಗಿನ ನನ್ನ ಮಾತುಕತೆಯಲ್ಲಿ, ಆ ಕೆಂಪು-ಹಸಿರು ಸೊಪ್ಪು ‘ಲಹ್ಸುಅ’ (ಕೀರೆ ಸೊಪ್ಪು) ಎಂಬುದನ್ನು ನನಗೆ ತಿಳಿಸಲಾಯಿತು. ನಮ್ಮ ಕ್ಯಾಂಪಸ್ ನಲ್ಲಿ ಈ ಕಳೆ ಯಥೇಚ್ಚವಾಗಿ ಬೆಳೆಯುವುದನ್ನು ನಾನು ನೋಡಿದ್ದೇನೆ, ಆದರೆ ಅದನ್ನು ತಿನ್ನಬಹುದು ಎಂದು ನಾನೆಂದೂ ಎಣಿಸಿರಲಿಲ್ಲ. ಬಹಳ ಸಾಮಾನ್ಯ ಕಳೆಯಂತೆ ಕಾಣುವ ಲಹ್ಸುಅ, ಪೋಷಕಾಂಶಗಳುಳ್ಳ ಮತ್ತು ಕಲಬೆರಿಕೆಯಿಲ್ಲದ ಆಹಾರದ ಕೊರತೆಯಿಂದ ಕಷ್ಟ ಅನುಭವಿಸುತ್ತಿರುವ ಮಹಿಳೆಯರಿಗೆ “ಚಿನ್ನದ ಕೊಯ್ಲು” ಆಗಿ ಪರಿಣಮಿಸಿದೆ. ಹೈಬ್ರಿಡ್ ತರಕಾರಿಗಳ ಹೆಚ್ಚಳದ ನಡುವೆ, ಲಹ್ಸುಅ ಪ್ರೊಟೀನ್  ಭರಿತ ಉತ್ಪನ್ನವಾಗಿ, ಅದರ ಕೆಂಪು-ಹಸಿರುವ ಎಲೆಗಳಿಂದ ಸುಲಭವಾಗಿ ಪತ್ತೆಹಚ್ಚಬಲ್ಲ ಸೊಪ್ಪಾಗಿದೆ. ದಾದರಿಯ ಮಹಿಳೆಯರಿಗೆ, ಪ್ರತಿದಿನದ ಊಟದ ಸಂಗತಿಯಿಂದ ಪರಂಪರೆಯ ಸಂಕೇತವಾಗಿ ಬದಲಾಗಿರುವ ಸಾಗ್ ಅನ್ನು ಮಾಡುವುದಕ್ಕೆ ಬಹಳ ಮುಖ್ಯ ಸಾಮಗ್ರಿಯಾಗಿದೆ ಲಹ್ಸುಅ. ಭಾನುವಾರದ ಮಧ್ಯಾಹ್ನಗಳಂದು ಯಾವಾಗ ಇಡೀ ಕುಟುಂಬ ಮನೆಯಲ್ಲಿ ಇರುತ್ತದೋ, ಆಗ ಹಿರಿಯ ಮಹಿಳೆಯರು ಲಹ್ಸುಅ (Amaranthus viridis), ಬತುವಾ (Chenopodium album) ಮತ್ತು ಚೋಲೈ (Amaranthus – ಹರಿವೆ ಸೊಪ್ಪು) ಕೊಯ್ಲಿಗೆ ಹತ್ತಿರದ ಕಾಡುಗಳು ಅಥವಾ ಕೆರೆಗಳಿಗೆ ಹೋಗುತ್ತಾರೆ, ಮತ್ತು ಅವರು ಅದನ್ನು ‘ಉಚಿತ ಸಬ್ಜಿ’ ಎಂದು ಕರೆಯುತ್ತಾರೆ. ದಾದರಿಯ ಮಹಿಳೆಯರೊಂದಿಗೆ ಹೋಗಿದ್ದ ನನ್ನ ಒಂದು ಈ ಕೊಯ್ಲು ಪ್ರವಾಸದಲ್ಲಿ, ಮಹಿಳೆಯರ ನಡುವೆ ಬಾಂಧವ್ಯ ಬೆಳೆಯುವ ಸಂಪ್ರದಾಯವಾಗಿ ಕೂಡ ಹೇಗೆ ಈ ಕೊಯ್ಲು ಬೆಳೆದಿದೆ ಎಂಬುದನ್ನು ನಾನು ಗಮನಿಸಿದೆ. ಕುಟುಂಬದ ಹಿರಿಯ ಮಹಿಳೆಯರು ಮಾತ್ರ ಕೊಯ್ಲಿಗೆ ಹೋಗುವಾಗ, ಆ ಅಭ್ಯಾಸಕ್ಕೆ ಹಲವು ಸಾಂಸ್ಕೃತಿಕ ಮತ್ತು ಲಿಂಗ ಸಂಬಂಧಿ ಆಯಾಮಗಳು ಕೂಡ ಇವೆ; ಇದನ್ನು ಜಾಸ್ತಿ ‘ಹೊರ ಹೋಗುವಿಕೆ’ ಎಂದು ಪರಿಗಣಿಸಲಾಗುತ್ತಾದ್ದರಿಂದ ಹೊಸದಾಗಿ ಮದುವೆಯಾದ ವಧುಗಳು ಈ ಅಭ್ಯಾಸದಲ್ಲಿ ಭಾಗಿಯಾಗುವುದಿಲ್ಲ, ‘ ಸೊಸೆಯರ ಹಿಂದೆ ನಾವಿದ್ದೇವೆಲ್ಲ. ಅವರು ಹೋಗುವ ಅವಶ್ಯಕತೆ ಏನಿದೆ’.

ಲಹ್ಸುಅದಂತ ತರಕಾರಿಗಳ ಕೊಯ್ಲು ಮಾಡುವ ಕಾಲ ಸಾಮಾನ್ಯವಾಗಿ ಮುಂಗಾರು ಮತ್ತು ಮಳೆಗಾಲದಿಂದ ಚಳಿಗಾಲಕ್ಕೆ ಬದಲಾಗುವ ಮಾಸಗಳು; ಕೆಲಸದಿಂದ ಹಿಂದಿರುಗುವಾಗ ಕೊಯ್ಲು ಮಾಡಲು ಹೆಚ್ಚಿನ ಪ್ರಶಸ್ತ ಪ್ರದೇಶಗಳನ್ನು ತಾವು ಹೇಗೆ ಹುಡುಕಿಕೊಳ್ಳುತ್ತಾರೆಂದು ಹಳ್ಳಿಯ ಮಹಿಳೆಯರು ನನ್ನೊಂದಿಗೆ ಚರ್ಚಿಸಿದರು. ಹಿರಿಯ ಮಹಿಳೆಯರು ಕೊಯ್ಲು ಮಾಡಿದ ಉತ್ಪನ್ನವನ್ನು ಶಾಲಿನಲ್ಲಿ ಅಥವಾ ಸೀರೆಯ ಸೆರಗಿನಲ್ಲಿ ಕಟ್ಟಿಕೊಂಡುಬಂದು ಅಡುಗೆ ಮತ್ತು ಸಾಗ್ ಮಾಡುವುದಕ್ಕೆ ಕುಟುಂಬದ ಕಿರಿಯ ಮಹಿಳೆಯರಿಗೆ ಕೊಡುತ್ತಾರೆ. ಸಾಗ್ ತಯಾರು ಮಾಡುವುದಕ್ಕೆ ಸುಮಾರು 2-3 ಗಂಟೆಗಳ ಕಾಲ ಹಿಡಿಯಲಿದ್ದು, ಆ ಸಮಯದಲ್ಲು ಲಹ್ಸುಅವನ್ನು ತೊಳೆದು, ಕತ್ತರಿಸಲಾಗುತ್ತದೆ ಮತ್ತು ಮಣ್ಣಿನ ಒಲೆ ಅಥವಾ ಗ್ಯಾಸ್ ಸ್ಟೋವ್ ಮೇಲೆ ಸುಮಾರು 1 ಗಂಟೆಯ ಕಾಲ ಬೇಯಿಸಲಾಗುತ್ತದೆ. ಮಹಿಳೆಯರು ತಾವು ಕೊಯ್ಲು ಮಾಡಿದ ಎಲ್ಲಾ ಬಗೆಯ ಸೊಪ್ಪುಗಳನ್ನು ಸಾಗ್ ಗೆ ಹಾಕಲು ಬಯಸುತ್ತಾರೆ, ಅದು ದೊರಕುವ ಆಧಾರದ ಮೇಲೆ ಲಹ್ಸುಅ, ಚೋಲೈ, ಪಾಲಾಕ್ ಮತ್ತು ಬಥೂಡೆಯನ್ನು ಅದು ಒಳಗೊಂಡಿರುತ್ತದೆ. ಸಾಗ್ ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುತ್ತದೆ ಮತ್ತು ಅದನ್ನು ಕಾದ ಎಣ್ಣೆ, ಜೀರಿಗೆ ಮತ್ತು ಈರುಳ್ಳಿಯ ಒಗ್ಗರಣೆಯೊಂದಿಗೆ ಪೂರ್ಣಗೊಳಿಸಲಾಗುತ್ತದೆ. ಈ ಸಾಗ್, ಪ್ರಕೃತಿಯನ್ನು ಬೆಚ್ಚನೆ ತಬ್ಬಿಕೊಂಡ ಅನುಭವ ನೀಡಿತು ಮತ್ತು ಇದು ನಮ್ಮಮ್ಮನ ಸಾಗ್ ಗಿಂತ ಬಹಳ ವಿಭಿನ್ನವಾಗಿತ್ತು. ಇದಕ್ಕೆ ಬಹಳ ಸ್ವಾದಗಳನ್ನೊಳಗೊಂಡ ನೆಲದ ರುಚಿಯಿದ್ದು, ಒಂದು ರೀತಿಯ ಸಣ್ಣ ಸಿಹಿಯ ಸ್ವಾದವೂ ಬೆರೆತು, ಹಲವು ಬೆಗೆಯ ಸೊಪ್ಪುಗಳ ಬಳಕೆಯಿಂದ ಅತ್ಯುತ್ತಮವಾದ ಹದ ಒದಗಿತ್ತು. ಅದು ಸುಲಭವಾಗಿ ಸಿಗುವುದರಿಂದ ಮತ್ತು ಕುಟುಂಬಕ್ಕೆ ಆರೋಗ್ಯಕರ, ಪೌಷ್ಟಿಕಾಂಶಯುಕ್ತ ಊಟಕ್ಕೆ ಕಾರಣವಾಗುವುದರಿಂದ ಮಹಿಳೆಯರು ಲಹ್ಸುಅಕ್ಕೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. “ಬಹಳ ಚೆನ್ನಾಗಿರತ್ತೆ, ಸ್ವಾದಿಷ್ಟವಾಗಿರತ್ತೆ, ಪೌಷ್ಟಿಕವಾಗಿರತ್ತೆ.” ಹಳ್ಳಿಯಾದ್ಯಂತ ಲಹ್ಸುಅವನ್ನು ಇನ್ನೂ ಹಲವು ವಿಧಗಳ ಅಡುಗೆಗೆ ಬಳಸಲಾಗುತ್ತದೆ, ಕೆಲವೊಮ್ಮೆ ಆಲೂಗಡ್ಡೆಗಳ ಜತೆಗೆ ಭುರ್ಜಿ ಮಾಡಲು ಬಳಸಿದರೆ, ಹಿಟ್ಟಿಗೆ ಕಲಸಿ ಪರಾಟಗಳನ್ನು ಕೂಡ ಮಾಡಲಾಗತ್ತೆ.

ದಾದರಿ ಅಥವಾ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೆಳೆದ ಮಹಿಳೆಯರಿಗೆ ಕೊಯ್ಲು ಮಾಡುವುದು ಅವರ ಪರಂಪರೆಯ ಭಾಗ, ಮತ್ತು ಅಂತಹ ಅಭ್ಯಾಸಗಳು ತಮ್ಮ ಕುಟುಂಬಕ್ಕೆ ತಾವು ಮಾಡುವ ಕೆಲಸವಷ್ಟೇ ಅಲ್ಲ, ಅದು ಅವರಿಗೆ ಸಂತಸ ನೀಡುವ ಕೆಲಸ ಕೂಡ. ಕೊಯ್ಲು ಮಾಡುವ ಸಮಯ ಬಾಂಧವ್ಯಗಳನ್ನು ಹೊಸೆಯುವ ಸಮಯವೂ ಆಗಿದ್ದು, ಅಡುಗೆಮನೆಯ ಗೋಡೆಗಳಾಚೆ ಪ್ರಕೃತಿಯ ಜತೆ ಸಂಪರ್ಕ ಸಾಧಿಸಿಕೊಳ್ಳುವುದಕ್ಕೂ ಅದು ಅವಕಾಶ ನೀಡುತ್ತದೆ. ಸಾಗ್ ತಯಾರಿಸುವುದಕ್ಕೆ ದೀರ್ಘ ಸಮಯ ಹಿಡಿಯುವುದರಿಂದ, ಎಲ್ಲಾ ಪೀಳಿಗೆಯ ಮಹಿಳೆಯರು ಒಟ್ಟಿಗೆ ಸೇರಿ ಸಾಗ್ ಅನ್ನು ಸಿದ್ಧಪಡಿಸುತ್ತಾರೆ. ಚಿಕ್ಕವರು ಸೊಪ್ಪು ಬಿಡಿಸಿ ಅದನ್ನು ಒಪ್ಪ ಮಾಡಲು ಸಹಾಯ ಮಾಡಿದರೆ, ಹಿರಿಯ ಮಹಿಳೆಯರು ಸೊಪ್ಪು ಕತ್ತರಿಸಿ ಗಂಟೆಗಳ ಕಾಲ ಸಾಗುವ ‘ಸಾಗ್ ಘೋಟ್ನಾ’ (ಕುದಿಸುವ) ಪ್ರಕ್ರಿಯೆ ಪ್ರಾರಂಭಿಸುತ್ತಾರೆ. ಅದ್ಭುತ ಸ್ವಾದ ಒದಗುವುದಕ್ಕೆ ಸಾಗ್ ಅನ್ನು ಕುದಿಸುವುದು ನಿಖರವಾಗಿರಬೇಕು. ಇದರಿಂದ ಸಿದ್ಧವಾಗುವ ಸಾಗ್ ಕೇವಲ ಅಡುಗೆ ಮಾತ್ರವಲ್ಲ; ಬದಲಾಗುತ್ತಿರುವ ಸಮಯದಲ್ಲಿ ಕುಟುಂಬವೊಂದು ತೋರಿಸುವ ಪುಟಿದೇಳುವಿಕೆಯನ್ನು ಪ್ರತಿಫಲಿಸುತ್ತದೆ.

ಹೀಗಿದ್ದರೂ, ನಗರೀಕರಣ ಹಳ್ಳಿಯಲ್ಲೆಲ್ಲಾ ಹರಡುತ್ತಿದ್ದಂತೆ, ಕೊಯ್ಲಿನ ಸಂಪ್ರದಾಯ ನಿಧಾನ ಸಾವನ್ನು ಕಾಣುತ್ತಿದೆ. ವರ್ಷಪೂರ್ತಿ ತರಕಾರಿಗಳು ಸಿಗುವ ಸೌಲಭ್ಯವಿರುವಾಗ ಮತ್ತು ಆಧುನಿಕ ಮಹಿಳೆಯ ಜೀವನದಲ್ಲಿ ಸಮಯದ ಅಭಾವ ಹೆಚ್ಚಾಗಿರುವಾಗ, ಈ ಹಳೆಯ ಅಭ್ಯಾಸ ಇಳಿಮುಖವಾಗುವುದಕ್ಕೆ ಅವು ಕಾರಣವಾಗಿವೆ. ಹಳ್ಳಿಯ ಮಹಿಳೆಯರು ಇಂಥ ವಿಶಿಷ್ಟ ಖಾದ್ಯವನ್ನು ತಿಂಗಳಿಗೆ ಎರಡು ಬಾರಿ ತಯಾರಿಸುತ್ತಾರೆ, ಏಕೆಂದರೆ ಇದು ಪ್ರಯಾಸಕರ ಪ್ರಕ್ರಿಯೆ. ದಾದರಿಯ ಬಹುತೇಕ ಮಹಿಳೆಯರು ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದು, ಅವರಿಗೆ ಕೊಯ್ಲಿಗೆ ಹೋಗುವುದಕ್ಕೆ ಮತ್ತು ಇಂತಹ ಪ್ರಯಾಸಕರ ಅಡುಗೆಯನ್ನು ಬೇಯಿಸಲು ಸಮಯವೇ ಸಿಗುವುದಿಲ್ಲ. ಕೊಯ್ಲಿಗೆ ಹೋಗುವುದು ಯುವ ಪೀಳಿಗೆಗೆ ಅಳಿವಿನಂಚಿನಲ್ಲಿರುವ ಅಭ್ಯಾಸವಾಗಿದೆ. ಕುಟುಂಬದ ಮಹಿಳೆಯರನ್ನು ಕೇಳಿದರೆ, ಇಡೀ ಕುಟುಂಬ ಸಾಗ್ ತಿನ್ನುವುದನ್ನು ಇಷ್ಟಪಟ್ಟರೂ, ಅವರ ಹೆಣ್ಣುಮಕ್ಕಳು ಕಾಲಕಾಲಕ್ಕೆ ಸಿಗುವ ಸೊಪ್ಪುಗಳ ಕೊಯ್ಲಿಗೆ ಹೋಗುತ್ತಿಲ್ಲ ಎಂದು ಬಹುತೇಕರು ಹೇಳುತ್ತಾರೆ. ಹೈಬ್ರಿಡ್ ತರಕಾರಿಗಳ ಬಗ್ಗೆ ಕಳವಳ ಹೆಚ್ಚಾಗುತ್ತಿದ್ದರೂ, ಕೊಯ್ಲಿಗೆ ಹೋಗಲು ಅಥವಾ ತಮ್ಮ ತರಕಾರಿಗಳನ್ನು ತಾವೇ ಬೆಳೆದುಕೊಳ್ಳಲು ಸಮಯ ಮತ್ತು ಸಂಪನ್ಮೂಲಗಳ ಅಭಾವವಿರುವುದರಿಂದ ಮಹಿಳೆಯರು ಕಲಬೆರೆಕೆಯ ಉತ್ಪನ್ನಗಳಿಗೆ ಸೀಮಿತರಾಗುತ್ತಿದ್ದಾರೆ.

ವಾಣಿಜ್ಯ ಕೃಷಿಯ ಪ್ರಸಕ್ತ ರೀತಿಗಳಿಂದ, ಕೊಯ್ಲಿನ ರೀತಿಯ ಸಂಪ್ರದಾಯಗಳು ಕಾಣೆಯಾಗುತ್ತಿವೆ; ವಿವಿಧ ಬಗೆಯ ಹೈಬ್ರಿಡ್  ತರಕಾರಿಗಳು, ಮತ್ತು ಕೀಟನಾಶಕಗಳ ಬಳಕೆಯಿಂದ, ಜನರ ಬಾಲ್ಯದಲ್ಲಿ ಅವರ ಜೀವನದ ಭಾಗವಾಗಿದ್ದ ಹಣ್ಣು ಮತ್ತು  ತರಕಾರಿಗಳ ಲಭ್ಯತೆಗೂ ಕುತ್ತುಬಂದಿದೆ. ದಾದರಿಯ ಮಹಿಳೆಯರು ಜಾಡಿ ತುಂಬ ಉಪ್ಪಿನಕಾಯಿ ಹಾಕುತ್ತಿದ್ದನ್ನು ಮತ್ತು ಅವರ ಅಜ್ಜಿಯಂದಿರ ಜತೆಗೆ ಹೋಗಿ ಖಿರ್ನಿ, ಜಂಗ್ಲಿಬೆರ್ ರೀತಿಯ ಹಣ್ಣುಗಳನ್ನು ಹತ್ತಿರದ ತೋಟಗಳು ಮತ್ತು ಕಾಡುಗಳಿಂದ ಕಿತ್ತುಕೊಂಡುಬರುತ್ತಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಹಿಂದೆ ಜೀವನ ಸರಳವಾಗಿತ್ತು ಎದು ರೇಣು ಅಕ್ಕ ನನಗೆ ಹೇಳಿದರು; ಕಲಬೆರೆಕೆಯ ಆಹಾರ, ತರಕಾರಿ ಮತ್ತು ಕಾಳುಗಳ ಬಗ್ಗೆ ಚಿಂತಿತರಾಗುವ ಅಗತ್ಯವೇ ಇರಲಿಲ್ಲ. ಆಕೆಗೆ, ಅಂದು  ಏನು ಸಿಗಬಹುದು ಎಂಬ ನಿಗೂಢತೆಯಿಂದಲೇ ಕೊಯ್ಲು ಸಂತಸ ತಂದುಕೊಡುವ ಸಂಗತಿಯಾಗಿತ್ತು. ನಾವು ಯಾವಾಗ ಲಹ್ಸುಅ ಕೊಯ್ಲಿಗೆ ಹೋಗಿದ್ದೆವೋ, ಚಳಿಗಾಲದ ಸೊಪ್ಪುಗಳಾದ ಚೋಲೈ ಮತ್ತು ಬತುವಾದ ಸಾಕಷ್ಟು ಸಂಗ್ರಹದ ಜತೆಗೆ ನಾವು ಹಿಂದಿರುಗಿದೆವು; ಅವುಗಳನ್ನು ಕೂಡ ರಾಯ್ತಾ (ಮೊಸರು ಬಜ್ಜಿ ರೀತಿಯ ಖಾದ್ಯ) ಮತ್ತು ಪರಾಟಗಳನ್ನು ಮಾಡಲು ಬಳಸಲಾಗುತ್ತದೆ. ಲಹ್ಸುಅ ಬದಲು ಆಕೆ ಏನನ್ನು ಕಿತ್ತುಕೊಳ್ಳುತ್ತಿರುವುದು ಎಂದು ಕೇಳಿದಾಗ, ಆಕೆ “ಅಷ್ಟು ಒಳ್ಳೆಯ ಬತುವಾ ಸೊಪ್ಪು ಬೆಳೆದಿದೆ” ಎಂದರು. ಕೊಯ್ಲಿಗಾಗಿ ಓಡಾಡಿದ ಮತ್ತು ಹೊರ ಆವರಣದಲ್ಲಿ ಸಾಗ್ ತಯಾರಿಸಿದ ನಂತರ, ನನಗೆ ನನ್ನಜ್ಜಿಯ ದೂರುಗಳು ಏನೆಂದು ಮನಗಾಣಿತು. ಮಹಿಳೆಯರಿಗೆ, ಆಹಾರ ಎಂದರೆ ಅದು ಅಡುಗೆಗೆ ಮಾತ್ರ ಸೀಮಿತವಾಗಿಲ್ಲ; ಅದಕ್ಕೆ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಮೌಲ್ಯವೂ ಇದೆ. ವಾಣಿಜ್ಯ ಕೃಷಿಯ ಪ್ರದೇಶವಾಗುತ್ತಿರುವ ದಾದರಿ, ಅಲ್ಲಿನ ಮಹಿಳೆಯರು ತಮ್ಮ ಮೊಮ್ಮಕ್ಕಳ ಬಗ್ಗೆ ಕಳವಳಗೊಳ್ಳುವಂತೆ ಮಾಡಿದೆ; ಅವರಿಗೆ ತಮ್ಮ ತರಕಾರಿಗಳನ್ನು ತಾವೇ ಬೆಳೆದುಕೊಳ್ಳಲು  ಅಥವಾ ಸೊಪ್ಪಿನ ಕೊಯ್ಲಿಗೆ ಹೋಗಲು ಸಮಯ ಮತ್ತು ಸಂಪನ್ಮೂಲಗಳಿಲ್ಲದೆ ಕಲಬೆರೆಕೆ ತರಕಾರಿಗಳನ್ನು ತಿನ್ನುವಂತಾಗಿದೆ. ಈಗ ಇದನ್ನು ನಿರ್ವಹಿಸುವುದು ಕಷ್ಟವಾದರೂ, ರೇಣು ಈ ಸೊಪ್ಪುಗಳ ಕೊಯ್ಲಿನ ಸಂಪ್ರದಾಯವನ್ನು ಜೀವಂತವಾಗಿ ಇಟ್ಟುಕೊಳ್ಳಲು ಬಯಸುತ್ತಾರೆ, ಏಕೆಂದರೆ ಅವು ಸಸ್ತಾ, ಪೌಷ್ಟಿಕ, ಮತ್ತು ದಾದರಿಯ ಭಯಾನಕ ಚಳಿಗಾಲದ ಶೀತದಲ್ಲಿ ಅತ್ಯುತ್ತಮ ಹಿತ ನೀಡುವ ಅದ್ಭುತ ಆಹಾರವಾಗಿರುವುದರಿಂದ. ನನಗೆ ಈ ಕೊಯ್ಲಿನ ಅನುಭವ ಬಹಳ ಕಾಲ ನೆನಪಿನಲ್ಲಿ ಉಳಿಯುವಂತದ್ದು ಮತ್ತು ತಿಳಿವಳಿಕೆಯುಕ್ತವಾದದ್ದು.

ಈ ಬರಹಕ್ಕೆ ಜೀವ ತುಂಬಿದ ರೇಣು ಅಕ್ಕ, ಮಹೇಶ್, SNIOEಯ ಅನುರಾಗ್ ಅವರುಗಳಿಗೆ ಧನ್ಯವಾದಗಳು. ನನ್ನ ಕಾಲೇಜಿನ ಸಹಪಾಠಿ ಶ್ಯಾಮ ಸೂರ್ಯ ಸಾಯಿ ತೇಜ ಗುಗ್ಗಿಲಪು ಫೋಟೋಗಳನ್ನು ತೆಗೆದಿದ್ದಾರೆ.

Comments

No comments yet. Why don’t you start the discussion?

Leave a Reply

Your email address will not be published. Required fields are marked *

oneating-border
Scroll to Top
  • The views expressed through this site are those of the individual authors writing in their individual capacities only and not those of the owners and/or editors of this website. All liability with respect to actions taken or not taken based on the contents of this site are hereby expressly disclaimed. The content on this posting is provided “as is”; no representations are made that the content is error-free.

    The visitor/reader/contributor of this website acknowledges and agrees that when he/she reads or posts content on this website or views content provided by others, they are doing so at their own discretion and risk, including any reliance on the accuracy or completeness of that content. The visitor/contributor further acknowledges and agrees that the views expressed by them in their content do not necessarily reflect the views of oneating.in, and we do not support or endorse any user content. The visitor/contributor acknowledges that oneating.in has no obligation to pre-screen, monitor, review, or edit any content posted by the visitor/contributor and other users of this Site.

    No content/artwork/image used in this site may be reproduced in any form without obtaining explicit prior permission from the owners of oneating.in.