ಪುಡ್ಡಿಂಗ್, ಸಲಾಡ್, ಸಾರು ಮತ್ತಿತರ ಅರ್ಜೆಂಟ್ ಸಮಾಚಾರಗಳು
Volume 1 | Issue 4 [August 2021]

ಪುಡ್ಡಿಂಗ್, ಸಲಾಡ್, ಸಾರು ಮತ್ತಿತರ ಅರ್ಜೆಂಟ್ ಸಮಾಚಾರಗಳು <br>Volume 1 | Issue 4 [August 2021]

ಪುಡ್ಡಿಂಗ್, ಸಲಾಡ್, ಸಾರು ಮತ್ತಿತರ ಅರ್ಜೆಂಟ್ ಸಮಾಚಾರಗಳು

ಪುಷ್ಪಮಾಲಾ ಎನ್

Volume 1 | Issue 4 [August 2021]

ಪುಷ್ಪಮಾಲಾ ಎನ್.


ಅನುವಾದ: ವಿಘ್ನೇಶ ಹಂಪಾಪುರ

ತಮ್ಮ ಇತ್ತೀಚಿನ ‘ಗೌರಿ ಲಂಕೇಶರ ಅರ್ಜೆಂಟ್ ಸಾರು’ ಪ್ರದರ್ಶನದ ನಂತರ ಪುಷ್ಪಮಾಲಾರವರೊಡನೆ ಎನ್. ರಾಜ್ಯಲಕ್ಷ್ಮಿರವರು ನಡೆಸಿದ ಸಂದರ್ಶನ.

ರಾಜ್ಯಲಕ್ಷ್ಮಿ

ಪುಷ್ಪಮಾಲಾರವರೇ, ಇದು ಅಡಿಗೆ-ಊಟದ ಬಗ್ಗೆ ನಿಮ್ಮ ಎರಡನೆಯ ಪ್ರಸ್ತುತಿ, ಅಲ್ವಾ? ನಿಮ್ಮ ಮನೆತನದ ರೆಸಿಪೀ ಪುಸ್ತಕಗಳನ್ನ ಆಧಾರವಾಗಿ ಇಟ್ಟುಕೊಂಡು 2004ರಲ್ಲಿ ನೀವು ತೆಗೆದ ಕಿರುಚಿತ್ರ ‘ರಾಷ್ಟ್ರೀಯ ಖೀರ್ ಅಂಡ್ ದೇಸಿ ಸಲಾಡ್’ ಕುರಿತು ನಾನು ನಿಮ್ಮನ್ನ ಸಂದರ್ಶಿಸಿದ್ದೆ ಅಂಸತ್ತೆ. ಏನಿದು ಅಡಿಗೆಯ ಬಗ್ಗೆ ಕಲೆ? ಇವನ್ನೆಲ್ಲ ಕಲೆ ಅನ್ನಬಹುದಾ?

ಪುಷ್ಪಮಾಲಾ

(ನಕ್ಕು) ನಿಮಗೆ ಗೊತ್ತೇ ಇದೆ, ರಾಜ್ಯಲಕ್ಷ್ಮಿಯವರೇ, ಹೆಣ್ಣುಮಕ್ಕಳ ಕತೆಗಳು ಯಾವುದರ ಮೇಲೆ ಆಧಾರಿತವೋ ಅದರ ಬಗ್ಗೆಯೇ ಹೆಚ್ಚು ನನ್ನ ಕಲಾ ಪ್ರಸ್ತುತಿಗಳು. ಸುಮಾರು ವರ್ಷಗಳ ಹಿಂದೆ, ಚೆನ್ನೈನಲ್ಲಿನ ನ್ಯೂಟ್ರಿಶನಿಸ್ಟ್ ತಿಲಕಾ ಬಾಸ್ಕರನ್ ನನಗೊಂದು ಪುಸ್ತಕ ತೋರಿಸಿದ್ರು. ಅದು 1898ರಲ್ಲಿ ಪ್ರಕಟವಾದ ಓರ್ವ ರಾಮಚಂದ್ರ ರಾವ್ ಬರೆದಿರುವ ತಮಿಳಿನ ಮೊದಲ ರೆಸಿಪೀ ಪುಸ್ತಕ. ನಾನದನ್ನ ತಕ್ಷಣ ಫೋಟೋಕಾಪಿ ಮಾಡಿಕೊಂಡೆ. ಇಂಗ್ಲಂಡ್ ರಾಣಿ ವಿಕ್ಟೋರಿಯಾಗೆ ಸಮರ್ಪಿಸಿರುವ ಆ ಪುಸ್ತಕದ ಇಂಗ್ಲಿಷ್ ಮುನ್ನುಡಿಯಲ್ಲಿ ಇದನ್ನು ಓದಿ ಇಲ್ಲಿಯ ‘ನೇಟಿವ್’ – ದೇಸಿ – ಮಹಿಳೆಯರು ತಮ್ಮ ಗಂಡ-ಮಕ್ಕಳಿಗೆ ಪೌಷ್ಟಿಕವಾದ ಆಹಾರ ಮಾಡುವುದರಲ್ಲಿ ಸುಶಿಕ್ಷಿತರಾಗಲಿ ಎಂದೇ ಬರೆದದ್ದು ಅಂತ ಲೇಖಕರು ಹೇಳ್ತಾರೆ. ಪುರುಷಪ್ರಾಧಾನ್ಯತೆ ಬಗ್ಗೆ ಹೇಳಿ ಮತ್ತೆ! ತಮಿಳಿನಲ್ಲಿ ಬರೆದಿರುವ ಮಿಕ್ಕ ಪುಸ್ತಕದ ಉದ್ದಕ್ಕೂ ಆಕರ್ಷಕ ಚಿತ್ರಗಳಿವೆ: ಉತ್ತಮಗೊಳಿಸಿರುವ ಸೌದೆ ಒಲೆಗಳು, ಹೊಸ ಅಡಿಗೆ ಸುಧಾರಣೆಗಳು, ಅಡಿಗೆಮನೆಯ ಡಿಸೈನುಗಳು, ಪಾತ್ರೆಗಳು, ಇತ್ಯಾದಿ. ಈ ಪುಸ್ತಕ ನನ್ನ ರೆಸಿಪೀ ಪುಸ್ತಕಗಳ ಸಂಗ್ರಹದಲ್ಲಿ ಸೇರಿತು. ನನಗೆ ಮುಂಚಿಂದಲೂ ರೆಸಿಪೀ ಅನ್ನೋದು ಆಧುನಿಕತೆಯ ಸಂಕೇತ, ಸಾಮಾಜಿಕ ಸುಧಾರಣೆಯ ಗುರುತು ಅನ್ನುವ ಪ್ರತಿಪಾದನೆಯ ಬಗ್ಗೆ ಬಹಳ ಆಸಕ್ತಿ. ಅಷ್ಟೇ ಅಲ್ಲದೆ, ನಾನು ಅಡಿಗೆಮನೆ, ಮನೆ, ಸಂಸಾರ ಈ ವಿಷಯಗಳ ಸುತ್ತ ಕಟ್ಟಿದ್ದ ಫೆಮಿನಿಸ್ಟ್ ಕಲೆಯ ಬಗ್ಗೆ ಯೋಚಿಸುತ್ತಿದ್ದೆ. ಇವುಗಳಲ್ಲಿ ಬಹಳ ಪ್ರಸಿದ್ಧವಾದ ‘ದಿ ಡಿನ್ನರ್ ಪಾರ್ಟಿ’ ನಿಮಗೆ ಗೊತ್ತೇ ಇದೆ. 1979ರಲ್ಲಿ ಅಮೇರಿಕಾದ ಕಲಾವಿದೆ ಜೂಡಿ ಚಿಕಾಗೋರವರು ಸೃಷ್ಟಿಸಿದ ಈ ಕಲಾಕೃತಿಯಲ್ಲಿ 39 ಬೇರೆ ಬೇರೆ ಪೌರಾಣಿಕ, ಐತಿಹಾಸಿಕ ಮಹಿಳೆಯರ ಕೊಡುಗೆಗಳನ್ನ ಪ್ರದರ್ಶಿಸಲು 39 ಆವರಣಗಳನ್ನ ರೂಪಿಸಿದ್ದಾರೆ. ಒಂದು ತ್ರಿಕೋನಾಕಾರದ ಟೇಬಲ್, ಅದರ ಮೇಲೆ ಯೋನಿಯ ರೂಪದ ತಟ್ಟೆಗಳು. ಇದು ಐತಿಹಾಸಿಕ ದಾಖಲೆಗಳಿಂದ ಹೆಣ್ಣನ್ನು ವರ್ಜಿಸುವ ಅಭ್ಯಾಸವನ್ನ ಕೊನೆಗೊಳಿಸಲು ಸೃಷ್ಟಿಸಿದ ಆಕೃತಿ ಎಂಬುದು ಕಲಾವಿದರ ಹೇಳಿಕೆ.

ರಾಜ್ಯಲಕ್ಷ್ಮಿ

‘ದಿ ಡಿನ್ನರ್ ಪಾರ್ಟಿ’ ಕಾಂಟ್ರವರ್ಶಿಯಲ್ ಆಗಿತ್ತಲ್ವಾ?

ಪುಷ್ಪಮಾಲಾ

ಏನು ಹೇಳ್ತಿರಾ – ಇದು ಫೆಮಿನಿಸ್ಟ್ ಕಲೆಯ ಮೊದಲ ದಿನಗಳಲ್ಲಿ ಹಲವಾರು ಕಲಾವಿದರು ಒಟ್ಟಿಗೆ ಸೇರಿ ಪಿಂಗಾಣಿ, ಹೊಲಿಗೆ, ಕಸೂತಿ ಹೀಗೆ ಅತ್ಯುತ್ತಮ ಕರಕೌಶಲ್ಯಗಳನ್ನ ಉಪಯೋಗಿಸಿ ತಯಾರಿಸಿದ ಒಂದು ಪ್ರಭಾವಶಾಲಿ, ಮಾರ್ಗದರ್ಶಿ ಕಲಾಕೃತಿ. ಇದು ಮೂಲತತ್ವವಾದಿ – ಅಂದ್ರೆ ಎಸ್ಸೆಂಷಿಯಲಿಸ್ಟ್ – ಎಂದು ಪರಿಗಣಿಸಬಹುದು. ಅಂದ್ರೆ, ಹೆಣ್ಣನ್ನ ತನ್ನ ಜನನೇಂದ್ರಿಯಕ್ಕೆ ಇಳಿಸಿಬಿಡತ್ತೆ ಅಂತಲೋ, ಅವಳ ಅಸ್ತಿತ್ವದ ಮೂಲತತ್ವವೇ ಅವಳ ಜನನಾಂಗಗಳು ಅಂತ ಪ್ರತಿಪಾದಿಸತ್ತೆ ಅಂತಲೋ ಅಂದುಕೊಳ್ಳಬಹುದು. ಇನ್ನೂ ಕೆಲವರು ಇದು ಯೂರೋಸೆಂಟ್ರಿಕ್ ಎಂದು, ಅಶ್ಲೀಲವಾದದ್ದು ಎಂದು ಹೇಳಿದ್ದಿದೆ. ಆದರೆ ಈ ಕಲಾಕೃತಿಗೆ ಅದರದ್ದೇ ಸಮಯ, ಇತಿಹಾಸ, ಪ್ರಶ್ನೆಗಳಿವೆ ಅನ್ನೋದನ್ನ ನಾವು ನೆನಪಿಟ್ಟುಕೊಳ್ಳಬೇಕು. ಮೊದಮೊದಲಿನ ಫೆಮಿನಿಸ್ಟ್ ಕಲಾವಿದರು ಪುರುಷ ಪ್ರಧಾನವಾದ ನಮ್ಮ ಕಲೆಯ ಚರಿತ್ರೆಯನ್ನ ಬದಲಿಸುವ ನಿಟ್ಟಿನಲ್ಲಿ ‘ಕೀಳು,’ ದುರ್ಬಲ, ಸ್ತ್ರೀಸಹಜವಾದದ್ದು ಎಂದು ನಿರ್ಲಕ್ಷ್ಯವಾಗುತ್ತಿದ ಕರಕೌಶಲ್ಯಯವನ್ನು ಕೇಂದ್ರಬಿಂದುವನ್ನಾಗಿ ಮಾಡಿಕೊಂಡು, ಹೆಣ್ಣಿನ ದೇಹ ಮತ್ತು ಲೈಂಗಿಕತೆಯನ್ನು ‘ಉನ್ನತ’ವಾದ ಕಲೆಯ ವಸ್ತು-ವಿಷಯವನ್ನಾಗಿ ಮಾಡಿದರು. ಬೃಹದಾಕಾರದ, ಸವಿಸ್ತಾರವಾದ, ಸುಂದರವಾಗಿ ನಿರ್ವಹಿಸಿರುವ ‘ದಿ ಡಿನ್ನರ್ ಪಾರ್ಟಿ’ಯನ್ನ ನಾವು ಮೊಟ್ಟಮೊದಲ ಸ್ತ್ರೀಪ್ರಾಧಾನ್ಯ ಕಲಾಕೃತಿ ಎಂದು ಪ್ರಶಂಸಿಸುತ್ತೀವಿ. ನಾನಿದನ್ನ ಬ್ರುಕ್ಲಿನ್ ಮ್ಯೂಸಿಯಮ್ಮಿನಲ್ಲಿ ನೋಡಿದ್ದೀನಿ – ಅದ್ಭುತವಾಗಿದೆ!

ರಾಜ್ಯಲಕ್ಷ್ಮಿ

ಆದರೆ ‘ರಾಷ್ಟ್ರೀಯ ಖೀರ್’ ರೆಸಿಪೀಗಳ ಬಗ್ಗೆಯೋ, ಅಡಿಗೆಯ ಬಗ್ಗೆಯೋ ಅಲ್ಲ, ಹೌದಲ್ಲ?

ಪುಷ್ಪಮಾಲಾ

ಇಲ್ಲ, ‘ರಾಷ್ಟ್ರೀಯ ಖೀರ್’ “ರಾಷ್ಟ್ರ” ಎಂಬ ಪರಿಕಲ್ಪನೆಯ ಬಗ್ಗೆ. ನೀವಿದನ್ನ ರಾಷ್ಟ್ರಕ್ಕೊಂದು ರೆಸಿಪೀ ಅಂತ ನೋಡಬಹುದೇನೋ! ಹೀಗೇ ಒಮ್ಮೆ, ವರ್ಷಗಳ ಹಿಂದೆ ತೀರಿಕೊಂಡ ನಮ್ಮಮ್ಮನ ಹಾಗು ನಮ್ಮತ್ತೆಯ ರೆಸಿಪೀ ಪುಸ್ತಕಗಳು ಸಿಕ್ಕಿದವು. ಅವು ಹಳೆಯ ಪುಸ್ತಕಗಳು, ಕಿತ್ತುಹೋಗುತ್ತಿದ್ದವು. ಡೈರಿಗಳ ರೀತಿ ಇದ್ವು. ಅವರ ಜೀವನದ ದಾಖಲೆ. ಇಂತಹ ಮನೆಯೊಳಗಿನ ವಸ್ತುವನ್ನ ಉಪಯೋಗಿಸಿಕೊಂಡು ಆ ಕಾಲದ ಬಗ್ಗೆ ತಿಳಿಸಬೇಕು ಅಂತ ನಾನು. ನನ್ನಮ್ಮನ ಪುಸ್ತಕದಲ್ಲಿ ರೆಸಿಪೀಗಳು, ಮ್ಯಾಗಜೀನಿನಿಂದ ಹರಿದಿಟ್ಟ ಕಿವಿಮಾತುಗಳು ಇದ್ದಿದ್ದಾದರೆ, ನಮ್ಮತ್ತೆಯದ್ದು ಮೂಲತಃ ಅವರ ಕರ್ನಲ್ ಗಂಡನ ಆರ್ಮಿ ನೋಟುಪುಸ್ತಕಗಳು. ಅದರ ಅಂಚುಗಳಲ್ಲಿ, ಖಾಲಿ ಜಾಗಗಳಲ್ಲಿ ರೆಸಿಪೀಗಳು, ಹುಟ್ಟುಹಬ್ಬದ ಕವನಗಳು, ಸಾಮಾನು ಜೋಡಿಸಿಕೊಳ್ಳಲು ಮಾಡಿದ ಪಟ್ಟಿಗಳು, ಮತ್ತೆ ಅವರ ಹೆರಿಗೆ-ಬಾಣಂತನದ ಬಗ್ಗೆ ವಯ್ಯಕ್ತಿಕ ಭಾವನೆಗಳು ಕೂಡ ಬರೆದಿದ್ದವು — ಒಂದು ಆರ್ಮಿ ಜೀವನದ ದಾಖಲೆ. ಇವೆಲ್ಲ ಸುಮಾರು ಹತ್ತು ವರ್ಷದ ಅವಧಿಯ ಪುಸ್ತಕಗಳು. ಅವರ ಮಗ ಬೆಳೆದು ಸ್ಕೂಲಿನಲ್ಲಿ ರಫ್ ನೋಟಿಗಾಗಿಯೂ ಈ ಪುಸ್ತಕ ಬಳಿಸಿ ಅದರಲ್ಲಿ ಕಾರ್ಟೂನುಗಳನ್ನು ಬರೆದದ್ದೂ ಆಗಿದೆ. 1950-60ರಲ್ಲಿ ಸ್ವಾತಂತ್ರ್ಯದ ತ್ವರೆಯಲ್ಲಿ ಬರೆದ ಈ ಪುಸ್ತಕಗಳು ಆ ವರ್ಷಗಳ ಕುರಿತು ನನಗೆ ಸಿಕ್ಕ ಅತ್ಯೋನ್ನತವಾದ ಸಬಾಲ್ಟರ್ನ್ ಬರಹಗಳು — ಅಂದ್ರೆ ಸಮಾಜದ ಅಂಚಿನಲ್ಲಿದ್ದವರ ಬರಹಗಳು. ಅಂದಹಾಗೆ, ಆ ಸಮಯದಲ್ಲಿ ಮೂರು ಯುದ್ಧಗಳಾಗಿ ಆಹಾರವನ್ನು ರೇಶನ್ ಮಾಡಲಾಗಿತ್ತು. ಈ ಪುಸ್ತಕಗಳನ್ನ ಪರಿಶೀಲಿಸೋದಕ್ಕೆ ನನಗೊಂದು ದೃಷ್ಟಿಕೋನ ಸಿಕ್ಕಿದ್ದು ಫೆಮಿನಿಸ್ಟ್ ಸ್ಕಾಲರ್ ಸೂಸೀ ತರೂರವರು ಗುಜರಾತಿ ಲೇಖಕ ಸರೋಜ್ ಪಾಠಕ್ ಅವರ ಕುರಿತು ಬರೆದಿರುವ ಪ್ರಬಂಧದಲ್ಲಿ. ಅದರಲ್ಲಿ ಅವರು ಆಧುನಿಕ ಭಾರತೀಯ ಕುಟುಂಬವನ್ನ ಆಧುನಿಕ ಭಾರತದ ರೂಪಕದ ರೀತಿಯಲ್ಲಿ ಕಾಣ್ತಾರೆ. ನನ್ನ ನೋಟುಪುಸ್ತಕಗಳಲ್ಲಿಯೂ ಅಷ್ಟೇ. ಅವುಗಳಲ್ಲಿನ ಬರಹಗಳನ್ನಿಟ್ಟುಕೊಂಡು ನಾನು ಸ್ಕ್ರಿಪ್ಟ್ ತಯಾರಿಸಿದೆ. ಮತ್ತೆ ಚಿತ್ರದ ರಚನಾಸೂತ್ರಗಳಿಗಾಗಿ ಸ್ತಬ್ಧಚಿತ್ರ, ಕಾರ್ಟೂನ್, ಹಾಗು ಐಸಂಸ್ಟೈನಿನ ‘ಮಾಂಟೇಜ್’ ಇವುಗಳ ಮೊರೆಹೋದೆ. ಪಾತ್ರಗಳೆಲ್ಲರೂ ಬ್ಲ್ಯಾಕ್ ಬೋರ್ಡಿನ ಮೇಲೆ ಬಳಪಗಳನ್ನಿಟ್ಟುಕೊಂಡು ಬರೆಯುತ್ತಾ, ಅಳಿಸುತ್ತಾ, ಮತ್ತೆ ಬರೆಯುತ್ತಾ, ಒಂದು ಪ್ಯಾಲಿಂಪ್ಸೆಸ್ಟ್ ಅಂತೀವಲ್ಲ ಅದನ್ನ ರಚಿಸುತ್ತಾರೆ. ಪ್ರತಿ ಪಾತ್ರಧಾರಿಯೂ ನೂತನವಾಗಿ ಹೊರಹೊಮ್ಮುತ್ತಿರುವ ರಾಷ್ಟ್ರದ ಪ್ರಜೆಗಳ ಪಡಿಯಚ್ಚು: ಪಟ್ಟುಹಿಡಿದು ಯುದ್ಧದ ದಾಖಲೆಯನ್ನು ಮಾಡುತ್ತಿರುವ ಅಪ್ಪ, ರೆಸಿಪೀಗಳನ್ನು ಹಾಗು ವೈಯ್ಯಕ್ತಿಕ ವಿವರಗಳನ್ನು ಬರೆಯುತ್ತಿರುವ ಅಮ್ಮ, ಮತ್ತು ಮಕ್ಕಳಂತೆ ತುಂಟಾಗಿ ಗೀಚುತ್ತಿರುವ ಮಗ. ಇಲ್ಲಿ ಗಮನಾರ್ಹ ವಿಷಯ ಏನಂದ್ರೆ: ಕರ್ನಲ್ ಆಗಿದ್ದ ಅಪ್ಪನಿಗೆ ನಾಟಕದ ಹುಚ್ಚು ಹಿಡಿದು ರಿಟೈರ್ ಆದಮೇಲೆ ಪ್ರವಾಸಿ ರಂಗತಂಡವನ್ನ ಸೇರ್ತಾರೆ. ಹಾಗು ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದ ಅಮ್ಮ ಎಂ.ಎಡ್. ಮಾಡಿಕೊಂಡು ಟೀಚರ್ ಟ್ರೈನಿಂಗ್ ಸಂಸ್ಥೆಯಲ್ಲಿ ಪಾಠ ಪ್ರಾರಂಭಿಸುತ್ತಾರೆ. ಕಾಲೇಜಿನ ರಂಗದ ಮೇಲೆ ಭೇಟಿಯಾದ ಇವರದ್ದು ಅಂತರ್ಜಾತಿ ಪ್ರೇಮ ವಿವಾಹ. ಹುಡುಗಿ ಸಸ್ಯಹಾರಿ ಇವರ ಮನೆಯವಿರಿಗಾಗಿ ಮೀನು-ಮಾಂಸ ಅಡಿಗೆ ಮಾಡಲು ಕಲೆತವರು. ಇಂತಹ ಸಂಕೀರ್ಣತೆಗಳೆಲ್ಲ ಅಳಿಸಿಹೋಗಿ ಈ ನೋಟುಪುಸ್ತಕಗಳಲ್ಲಿ ತಮ್ಮ ಲಿಂಗಕ್ಕೆ ಅನುಗುಣವಾಗಿ, ಸ್ಟೀರಿಯೋಟಿಪಿಕಲ್ಲಾಗಿ ವರ್ತಿಸುತ್ತಾರಲ್ಲ, ಏನಿದರ ಅರ್ಥ? ಆದರ್ಶ ಪ್ರಜೆಗಳಂದ್ರೆ ಮೂಲತಃ ಪಡಿಯಚ್ಚುಗಳು ಅಷ್ಟೇನಾ?

ರಾಜ್ಯಲಕ್ಷ್ಮಿ
ಮತ್ತದರ ವಿಶಿಷ್ಟವಾದ ಶೀರ್ಷಿಕೆ, ಅದರ ಸ್ಪೆಲ್ಲಿಂಗ್ – ಇವೆಲ್ಲ ಎಲ್ಲಿಂದ ಸಿಕ್ಕಿದ್ದು?

ಪುಷ್ಪಮಾಲಾ
(ನಕ್ಕು) ನಮ್ಮಮ್ಮ 1950ರ ಮ್ಯಾಗಜೀನಿನಿಂದ ಹರೆದು ಜೋಪಾನ ಮಾಡಿದ್ದ, ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪ್ರಕಟವಾಗಿದ್ದ ಎರಡು ರೆಸಿಪೀಗಳಿಂದ ಬಂದದ್ದು ಈ ಶೀರ್ಷಿಕೆ. ಎರಡೂ ಅಡಿಗೆಗಳಲ್ಲಿ ನಮ್ಮ ಬಾವುಟದ ಬಣ್ಣಗಳಿವೆ. ತಿನ್ನುವ ಮುಂಚೆ ದೇಶಕ್ಕೊಂದು ಸಲಾಮು ಹೊಡೆಯಿರಿ ಎಂದೂ ಕೊನೆಯಲ್ಲಿ ಬರೆದಿದೆ. ನಾನಂದುಕೊಂಡೆ: ಈ ಎರಡೂ ಅಡಿಗೆಗಳು ಭಾರತವನ್ನ ಎಷ್ಟು ನಿಖರವಾಗಿ ಬಣ್ಣಿಸುತ್ತವೆ, ಅಲ್ವಾ? ನೀವು ಭಾರತದಂತಹ ದೇಶದಲ್ಲಿ ವಾಸಿಸುವ ಅನೇಕ ಸಂಸ್ಕೃತಿಗಳುಳ್ಳ ವಿವಿಧ ಸಮುದಾಯದವರನ್ನು ಜನಾಂಗದವರನ್ನು ಖೀರಿನಂತಹ ಭಕ್ಷ್ಯದಲ್ಲಿ ವಿಲೀನವಾಗಿರುವ ಹಾಗೂ ಯೋಚಿಸಬಹುದು, ಅಥವಾ ಸಲಾಡಿನಂತಹ ಆಹಾರದಲ್ಲಿ ಪ್ರತ್ಯೇಕ ಪದಾರ್ಥಗಳು ಒಟ್ಟಿಗೆ ಬರುವ ಹಾಗೂ ಯೋಚಿಸಬಹುದು.

ರಾಜ್ಯಲಕ್ಷ್ಮಿ
ನೀವು ಸಾಮಾನ್ಯವಾಗಿ ಕ್ಯಾಮೆರಾ ಮುಂದೆ ಪ್ರದರ್ಶನಗಳನ್ನ ನೀಡ್ತೀರಿ, ಫೋಟೊದಲ್ಲಿಯಾಗಲಿ ವೀಡಿಯೋದಲ್ಲಿಯಾಗಲಿ. ಲೈವ್ ಕಾರ್ಯಕ್ರಮಗಳು ಅಷ್ಟೊಂದಿಲ್ಲ. ಆದರೂ 2004ರ ಈ ಚಿತ್ರದ ನಂತರ, ವರ್ಷಗಳು ಕಳೆದ ಮೇಲೆ, 2018ರಲ್ಲಿ ಮತ್ತೆ ಅಡಿಗೆಯ ಬಗ್ಗೆ ಲೈವ್ ಪ್ರದರ್ಶನ ನೀಡ್ತೀರಿ…

ಪುಷ್ಪಮಾಲಾ
2018ರಲ್ಲಿ ನನ್ನ ಆಪ್ತ ಗೆಳತಿ ಮತ್ತು ನೆರೆಹೊರೆಯಳಾಗಿದ್ದ ಗೌರಿ ಲಂಕೇಶ್ ನೆನಪಿನಲ್ಲಿ ಎನನ್ನಾರೊ ಮಾಡಿ ಅಂತ ಹೈದರಾಬಾದ್ ಸಾಹಿತ್ಯ ಸಮ್ಮೇಳನದಿಂದ ನನಗೆ ಕರೆ ಬಂತು. ಆ ವರ್ಷ ಅವರು ಮಹಿಳಾ ಪತ್ರಕರ್ತರನ್ನ ಸ್ಮರಿಸುತ್ತಾ ಆಚರಿಸುತ್ತಿದ್ದರು. 2017ರಲ್ಲಿ ಗೌರಿಯ ಹತ್ಯೆಯಾದ ಮೇಲೆ ಗೌರಿಯ ಬಗ್ಗೆ ಬಂದ ಲೇಖನಗಳಲ್ಲಿ ಅವರು ಒಂದು ಗಂಭೀರವಾದ ಶ್ರದ್ಧಾವಂತ ವ್ಯಕ್ತಿಯ ರೀತಿ ಕಂಡು ಬರ್ತಾರೆ – ಆದ್ರೆ ಅದು ಅವರ ಒಂದು ಮುಖವಷ್ಟೇ. ನಮಗೆ ತಿಳಿದ ಗೌರಿ ಚುರುಕೂ ಆಗಿದ್ದಳು, ಉಲ್ಲಾಸದಿಂದಿರೋಳು, ಸುಂದರಿ ಆಕೆ, ಎಲ್ಲರೊಂದಿಗೆ ಬೆರೆಯುವಂತವಳು, ಹಾಗೆ ಒಳ್ಳೆಯ ಹಾಸ್ಯಪ್ರಜ್ಞೆ ಇದ್ದವಳು. ದೊಡ್ಡ ಪಾರ್ಟಿಗಳನ್ನ ಏರ್ಪಾಡು ಮಾಡೋಳು, ಒಂದು ಒಳ್ಳೆಯ ಕುಕ್ ಕೂಡ. ನನಗೆ ಅನೇಕ ರೆಸಿಪೀಗಳನ್ನ ಕೊಟ್ಟಿದ್ದಾಳೆ, ಮತ್ತೆ ನಾನವನ್ನ ಇಂದೂ ಉಪಯೋಗಿಸ್ತೀನಿ. ಹಾಗಾಗಿ ಅವಳ ಬಗ್ಗೆ ಯಾವಾಗಲು ಬರುವ ಸ್ಮರಣೆಗಳಿಗಿಂತ ಭಿನ್ನವಾದದ್ದೇನಾರೋ ಮಾಡೋಣ ಅಂತ ಯೋಚಿಸುತ್ತಾ, ಅವಳ ಒಂದು ರೆಸಿಪೀಯನ್ನೇ ಎಲ್ಲರ ಮುಂದೆ ಸಾಮಾಜಿಕವಾಗಿ ಪ್ರದರ್ಶಿಸೋಣ ಅಂತ ನಾನಂದುಕೊಂಡೆ. ಈ ಪ್ರಸ್ತುತಿ ಸಾಂಪ್ರದಾಯಿಕ ಅಂತನ್ನಿಸಬೇಕು: ಹಿಂದು ಧರ್ಮದಲ್ಲಿ ಹಬ್ಬ-ಆಚರಣೆಯ ನಂತರದ ಪ್ರಸಾದದ ಹಾಗೂ ಹೌದು; ಕ್ರಿಸ್ಚಿಯನ್ ಪದ್ಧತಿಯ ಯೂಕರಿಸ್ಟಿನಲ್ಲಿ ಏಸುವಿನ ರಕ್ತಮಾಂಸವನ್ನು ಸೂಚಿಸುವ ವೈನ್ ಮತ್ತು ಬ್ರೆಡ್ ರೀತಿಯೂ ಹೌದು. ನಾನು ಈ ರೆಸಿಪೀಯನ್ನೇ ಪ್ರತ್ಯೇಕವಾಗಿ ಆರಿಸಿಕೊಂಡಿದ್ದಕ್ಕೆ ಕಾರಣ ಅದರ ಬಣ್ಣ: ಅರ್ಜೆಂಟ್ ಸಾರು ಕೆಂಪು ಕೆಂಪಾಗಿ ಹೊಳೆಯತ್ತೆ, ರಕ್ತದ ಹಾಗೆ, ಹಾಗಾಗಿ ನಮ್ಮ ತುರ್ತು ಸಮಯಕ್ಕೆ ಇದು ಸರಿಯಾದ ಬಣ್ಣ. ಹಾಗೇನೇ, ಇದರ ಅಂದದ ಹೈಬ್ರಿಡ್ ಹೆಸರು, ಮನೆಯ ವಾತಾವರಣವನ್ನ ನೆನಪಿಸುವ ಅಡಿಗೆಯ ಕ್ರಿಯೆ, ಮತ್ತೆ ಬಹುಶಃ ಅವರಮ್ಮ ಅಚಾನಕ್ಕಾಗಿ ಬಂದ ಅತಿಥಿಗಳಿಗಾಗೆಂದು ಕಲ್ಪಿಸಿದ ಈ ಸಾರನ್ನು ಗೌರಿಯೇ  ಮಾಡಿ ಬಡಿಸಿದ್ದಳಲ್ಲ ಎಂಬ ಭಾವನೆ — ಇವೆಲ್ಲವೂ ಗೌರಿಯನ್ನ ಜೀವಂತವಾಗಿಸುತ್ತದೆಯೇನೋ ಅಂತ. ಇದರಲ್ಲಿ ಭಾರತಮಾತೆಯು ಅನ್ನಪೂರ್ಣೆಯಾಗಿ ಈ ಸಮಾರಂಭವನ್ನ ನಡೆಸುತ್ತಾಳೆ. ಹಿಂದುತ್ವದವರು ಗೌರಿಯನ್ನ ಹತ್ಯೆ ಮಾಡಿರುವಾಗ ಅದೇ ಹಿಂದುತ್ವದ ಪ್ರತೀಕವಾಗಿರುವ ಭಾರತಮಾತೆಯ ಪರಿಕಲ್ಪನೆಯನ್ನ ಯಾಕೆ ಉಪಯೋಗಿಸುತ್ತಿದ್ದೀರಿ ಅಂತ ಜನ ಕೇಳಿದ್ದಿದೆ. ಆದರೆ ನಾನು ಸರಿಯಾಗಿ ಯೋಚಿಸಿಯೇ ಭಾರತಮಾತೆಯನ್ನ ಬಳಸಿರೋದು: ಅದು ಎಲ್ಲರು ಸ್ವೀಕರಿಸಿರುವ, ಎಲ್ಲರು ಗುರುತಿಸಿರುವ ಕ್ಲೀಷೆ. ಮತ್ತೆ ಗೌರಿಯನ್ನ ‘ಆಂಟಿ-ನ್ಯಾಷನಲ್’ ಎಂದು ಟೀಕಿಸಿದ ಇಂಟರ್ನೆಟ್ ಟ್ರೋಲುಗಳಿಗೆ ಇದೊಂದು ಅಪಹಾಸ್ಯದ ಉತ್ತರ!

Stills from Rashtriy Kheer and Desiy Salad (2004)
Photo Courtesy – Pushpamala N

ರಾಜ್ಯಲಕ್ಷ್ಮಿ

ಚಿತ್ರದಲ್ಲೂ ಈ ಪ್ರದರ್ಶನದಲ್ಲೂ ಬ್ಲ್ಯಾಕ್ ಬೋರ್ಡ್ ಉಪಯೋಗಿಸಿದ್ದೀರಿ. ಅಲ್ಲ ‘ರಾಷ್ಟ್ರೀಯ ಖೀರ್’ ನಲ್ಲಿ ನೋಟುಪುಸ್ತಕಗಳಿಂದ ವಿಷಯ ತೆಗೆದುಕೊಂಡ ಮೇಲೆ ಬ್ಲ್ಯಾಕ್ ಬೋರ್ಡ್ ಯಾಕೆ ಅಂತ? ಅಡಿಗೆಗೂ ಬ್ಲ್ಯಾಕ್ ಬೋರ್ಡಿಗೂ ಏನು ಸಂಬಂಧ?

ಪುಷ್ಪಮಾಲಾ

ಬ್ಲ್ಯಾಕ್ ಬೋರ್ಡ್ ಒಂದು ಶೈಕ್ಷಣಿಕ ಮಾಧ್ಯಮ. ‘ರಾಷ್ಟ್ರೀಯ ಖೀರ್’ನಲ್ಲಿ ಖಾಸಗಿಯಾಗಿ ಗೀಚಿದ ನೋಟುಗಳನ್ನು ಬ್ಲ್ಯಾಕ್ ಬೋರ್ಡ್ ಬಹಿರಂಗ ಮಾಡುತ್ತದೆ, ಚಿತ್ರಕ್ಕೊಂದು ಡ್ರಾಮಾ ಒಂದು ಆಕ್ಷನ್ ಕೊಡತ್ತೆ. ಹಾಗಾಗಿ ಚಿತ್ರದ ಎಡೆ ಕ್ಲಾಸುರೂಮಿನ ರೀತಿ ಆಗತ್ತೆ – ರಾಷ್ಟ್ರದ ಕ್ಲಾಸುರೂಮ್. ನಾನು 2018ರಲ್ಲಿ ‘ಅರ್ಜೆಂಟ್ ಸಾರು’ ಪ್ರದರ್ಶನ ಮಾಡಿದಾಗ ಬೋರ್ಡ್ ಉಪಯೋಗಿಸಿರಲಿಲ್ಲ. ಇನ್ನೂ ಸರಳವಾಗಿ ಬರೇ ಒಂದು ಅಡಿಗೆ ಟೇಬಲ್ ಬಳಿಸಿದ್ದಷ್ಟೇ. ಒಂದು ಬ್ಲ್ಯಾಕ್ ಬೋರ್ಡ್, ಬಣ್ಣ ಬಳೆದ ಊರಿನ ಹಿನ್ನಲೆ, ಮಾಸ್ಕು, ಅಸಿಸ್ಟಂಟಿಗೆ ಪೂರ್ತಿ ಪಿ.ಪಿ.ಇ. ಸೂಟು, ಆಮೇಲೆ ಒಂದು ವೆಲ್ವೆಟ್ ಕುಶನ್ ಇವೆಲ್ಲ 2021ರ ರಿಲಾಯಬಲ್ ಕಾಪಿಯವರ ‘ಮೀಲ್ಸ್ ರೆಡಿ’ ಪ್ರಾಜೆಕ್ಟಿಗೆ ಅಂತ ಸೇರಿಸಿದ ಅಂಶಗಳು. ‘ಮೀಲ್ಸ್ ರೆಡಿ’ ಪ್ರಾಜೆಕ್ಟು ವಾಸ್ತವದಲ್ಲಿ ಅಡಿಗೆ ಪಾಠಗಳ ಒಂದು ಸರಣಿ. ಮೊದಲಿಗೆ ನಾನು ಬ್ಲ್ಯಾಕ್ ಬೋರ್ಡನ್ನು ರೆಸಿಪೀ ಬರೆದು ಪ್ರದರ್ಶನವನ್ನ ಪ್ರಾರಂಭಿಸುವುದಕ್ಕೊಂದು ಸಾಧನ ಎಂದೇ ಯೋಚಿಸಿದ್ದು. ಆಮೇಲೆ ಅದು ಮುಂದೆ ನಡೆಯುವ ಪ್ರದರ್ಶನ ಒಂದು ಪಾಠಾಂತರ ಎಂದು ಬಯಲೂ ಮಾಡುತ್ತದೆ.


Still from Rashtriy Kheer and Desiy Salad (2004)
Photo Courtesy – Pushpamala N

ರಾಜ್ಯಲಕ್ಷ್ಮಿ

ಅಡಿಗೆ ಮಾಡೋದು ಒಂದು ಖಾಸಗಿ ವಿಚಾರ. ಅದು ಸಾರ್ವಜನಿಕ ಪ್ರದರ್ಶನವಾಗಿ ಹೊಂದುವುದೇ?

ಪುಷ್ಪಮಾಲಾ

(ಮುಗುಳ್ನಕ್ಕು) ಬಹಿರಂಗವಾಗಿ ವೀಕ್ಷಕರ ಮುಂದೆ ಅಡಿಗೆ ಮಾಡುವುದು ಗೊತ್ತಿಲ್ಲದ ವಿಚಾರವೇನಲ್ಲ – ಈಗ ಟಿವಿಯಲ್ಲಿ ಶೆಫ್ಫುಗಳೆಲ್ಲ ಹಾಗೆಯೇ ಜನಪ್ರಿಯರಾಗಿರೋದು. ಹೈದರಬಾದ್ ಸಾಹಿತ್ಯ ಸಮ್ಮೇಳನದಲ್ಲಿ ಚಿಕ್ಕ ಮಕ್ಕಳೂ ಸೇರಿ ಸುಮಾರು 150 ಜನರ ಮುಂದೆ ಒಂದು ಬಯಲಿನಲ್ಲಿ ಅರ್ಜೆಂಟ್ ಸಾರು ಮಾಡಿದ್ದು. ಅಡಿಗೆ ಮಾಡುವುದಕ್ಕೊಂದು ಟೇಬಲ್, ಭಾರತಮಾತೆಯ ಕಾಸ್ಟ್ಯೂಮಿನಲ್ಲಿ ನಾನು, ಅಷ್ಟೇ. ಟಿವಿಯ ಅಡಿಗೆ ಶೋಗಳಲ್ಲಿ ಸಾಮಾನ್ಯವಾಗಿ ಎಡಿಟ್ ಆಗದಿರುವ ಪೂರ್ಣವಿಧಾನವನ್ನ  ಯಾರೂ ನೋಡಿರಲ್ಲ. ಆದ್ರೆ ಇಲ್ಲಿ, ನಾನು ನನ್ನ ಭವ್ಯವಾದ ಕಾಸ್ಟ್ಯೂಮಿನಲ್ಲಿ, ನನ್ನ ಕಿರೀಟ ಒಡವೆ ಬಿಸಿಲಿಗೆ ಮಿನುಗುತ್ತಾ, ಪಪಿಯರ್-ಮಾಚೇಯಲ್ಲಿ ಮಾಡಿದ ನನ್ನ ಇನ್ನೆರಡು ಕೈಗಳು ಅಲುಗಾಡುತ್ತಾ, ನಾನು ಹೆಚ್ಚಿದ ಹಾಗೆ ಕೈಯ್ಯಾಡಿದ ಹಾಗೆ ಅಂಟಿಸಿದ್ದ ಬಾವುಟಗಳು ಬೀಸುತ್ತಾ, ನಾನು ಮೌನವಾಗಿ ಅಡಿಗೆ ಮಾಡುವುದನ್ನು ವೀಕ್ಷಕರೆಲ್ಲರೂ ಮಂತ್ರಮುಗ್ಧರಾಗಿ ನೋಡುತ್ತ ನಿಂತಿದ್ದರು. ಹೆಚ್ಚುತ್ತಿದ್ದ, ರುಬ್ಬುತ್ತಿದ ಶಬ್ದಗಳಿದ್ವು; ಒಗ್ಗರಣೆಯ ಸಿಡಿತ; ಮೇಲೇರಿದ ಹಬೆ, ಅಡಿಗೆಯ ಘಮ. ಕೊನೆಯಲ್ಲಿ ಅನ್ನ-ಸಾರಿನ ಸಣ್ಣ ಸಣ್ಣ ಪಾಲನ್ನ ಜನರಿಗೆ ಹಂಚಿದಾಗ ಎಲ್ಲರೂ ಬಂದು ಸ್ವೀಕರಿಸಿ ಆ ಕೂಟ ಸೇರಿ ಅಡಿಗೆಯ ರುಚಿಯಲ್ಲಿ ಪಾಲುಗೊಳ್ಳುವುದು ಕೂಡ ಪ್ರದರ್ಶನದ ಭಾಗವಾಗಿಹೋಯ್ತು. ಪ್ರದರ್ಶನದ ಪ್ರತಿ ಅಂಶವನ್ನು ನಿಧಾನವಾಗಿ ಅನುಭವಿಸಬೇಕು.

2018ರ ಹಿನ್ನಲೆ ಒಂದು ಸಾಹಿತ್ಯ ಸಮ್ಮೇಳನವಾದರೆ, ನನ್ನ ಇತ್ತೀಚಿನ ಬೆಂಗಳೂರು ಪ್ರದರ್ಶನ ರಿಲಾಯಬಲ್ ಕಾಪಿ ಅಂತ ಹೊಸ ಪ್ರಕಾಶಕರಿದ್ದಾರೆ – ಕಲಾವಿದರು ಕೊಟ್ಟ ರೆಸಿಪೀಗಳನ್ನು ಇಟ್ಟುಕೊಂಡು ಅಡಿಗೆ ಪುಸ್ತಕವೊಂದನ್ನ ಈಗ ತಾನೆ ಹೊರಗೆ ತಂದಿದ್ದಾರೆ –  ಅವರಿಗಾಗಿ ‘ಮೀಲ್ಸ್ ರೆಡಿ’ ಎಂಬ ಪ್ರಾಜೆಕ್ಟಿನಲ್ಲಿ ಮಾಡಿದ್ದು. ಹಿಂದಿನ ಪ್ರದರ್ಶನಗಳೆಲ್ಲವು ಅಡಿಗೆ ಪಾಠಗಳಾಗಿ ಮಾಡಿದ್ದಷ್ಟೇ. ಆದ್ರೆ ಈಗಿನದ್ದನ್ನ ಕೊರೋನದಿಂದಾಗಿ ಕೊನೆಯ ಗಳಿಗೆಯಲ್ಲಿ ಜೂಮ್ ಮೂಲಕ ಲೈವ್ ಸ್ಟ್ರೀಮ್ ಮಾಡಿದ್ದರಿಂದ ಅದರದ್ದೇ ಆದ ಬೇರೆ ಅನುಭವ ಇತ್ತು. ಈ ಸಾರ್ತಿ ನಾನು ನಂ 1 ಶಾಂತಿರೋಡ್ ಸ್ಟುಡಿಯೋಲಿರುವ ಗ್ಯಾಲರಿಯಲ್ಲಿ ಸ್ಟೇಜ್ ಸೆಟ್ ಒಂದನ್ನ ವಿನ್ಯಾಸ ಮಾಡಿದೆ: ಅದೇ ನನ್ನ ರಂಗಮಂಛ, ನನ್ನ ಪ್ರೊಸೀನಿಯಮ್. ಜೂಮಿನಲ್ಲಿದ್ದ ವೀಕ್ಷಕರಿಗೆ ಅಡಿಗೆಯ ಪರಿಮಳ ಅಥವ ರುಚಿಯನ್ನ ಸವಿಯಲಿಕ್ಕೆ ಆಗಲಿಲ್ಲ. ನ್ಯೂ-ಯಾರ್ಕಿನಿಂದ ಪ್ರದರ್ಶನವನ್ನ ನೋಡಿದವರೊಬ್ಬರು ನಂತರದಲ್ಲಿ ಬರೆದರು: ನಾನು ಯಾವ ದೂರದ ಜಾಗಕ್ಕೆ ಹೋಗಲು ಬಯಸುತ್ತೇನೊ, ಎಲ್ಲಿಗೆ ನನ್ನ ಪ್ರವೇಶವು ನಿಷೇದವಾಗಿದೆಯೋ, ಆ ದೂರದ ಜಾಗದಲ್ಲಿ ನಡೆಯುತ್ತಿರುವ ಕನಸಿನಂತಹ ದೃಶ್ಯವನ್ನ ಯಾವುದೋ ಮಾಯಾತಂತ್ರದ ಮೂಲಕ ನೋಡಿದ ಹಾಗೆ ಅನಿಸುತ್ತಿದೆ ಎಂದು. ಅಂದರೆ, ಯಾರದ್ದೋ ಖಾಸಗಿ ಸಾಂಸಾರಿಕ ಕ್ರಿಯೆಗಳನ್ನ ನಡೆಯುತ್ತಿರುವ ಹಾಗೆಹಾಗೆಯೇ ಒಂದು ಕಿಟಕಿಯ ಮೂಲಕ ಕಂಡ ಹಾಗೆ ನೋಡುಗರ ಅನುಭವ, ವಾಯರಿಸ್ಟಿಕ್ ಅಂತೀವಲ್ಲ ಹಾಗೆ.


Still from Gauri Lankesh’ Urgent Saaru live performance by Pushpamala N organized by Reliable Copy at 1. Shanthi Road, Bengaluru (2021)
Photo Courtesy – Pushpamala N

Zoom Recording of the performance

Gauri Lankesh’s Urgent Saaru – Pushpamala N from Reliable Copy on Vimeo.

ರಾಜ್ಯಲಕ್ಷ್ಮಿ

ನಿಮ್ಮ ಎಲ್ಲ ಪ್ರದರ್ಶನಗಳು ಸ್ತಬ್ಧವಾಗಿವೆ ಯಾಕೆ?

ಪುಷ್ಪಮಾಲಾ

ಹಳೆಯ ಸೈಲೆಂಟ್ ಸಿನೆಮಾ ಅಂದ್ರೆ ನನಗೆ ಪ್ರೀತಿ. ಮಾತಿನ ಬದಲು ಅದರಲ್ಲಿ ಟೈಟಲ್ ಕಾರ್ಡುಗಳಿರೋದು. ‘ರಾಷ್ಟ್ರೀಯ ಖೀರ್’ ಮಾಡುವಾಗ ರೆಸಿಪೀ ಪುಸ್ತಕಗಳಿಂದ ಕೆಲವೇ ಆಯ್ಕೆ ಮಾಡಿದ್ದ ಭಾಗಗಳನ್ನ ಚಿತ್ರದಲ್ಲಿ ತೋರಿಸಬೇಕು ಅಂತ ನಾನು ನಿರ್ದಿಷ್ಟವಾಗಿದ್ದೆ. ಆದರೆ ಅವನ್ನ ಸ್ಕ್ರಿಪ್ಟಿನಲ್ಲಿ ಹೇಗೆ ಅಳವಡಿಸೋದು ಅನ್ನೋದು ಇನ್ನೂ ಯೋಚಿಸಬೇಕಾಗಿತ್ತು. ಸ್ತಬ್ಧ ಚಿತ್ರವೇ ಇದಕ್ಕೆ ಸರಿಯಾದ ಮಾಧ್ಯಮ ಅಂತ ಅನ್ನಿಸಿತು. ಸಂಭಾಷಣೆಗಳಿದ್ದರೆ ಕಥನವನ್ನ ಕ್ರಮವಾಗಿ ಮಾಡಬೇಕು, ಹಿಂದಿನ ಸಂಭಾಷಣೆಗೂ ಮುಂದಿನದ್ದಕ್ಕೂ ಸಂಬಂಧ ಇರಬೇಕು, ಆದರೆ ಇಂಟರ್-ಟೈಟಲ್ಲುಗಳನ್ನ ಉಪಯೋಗಿಸಿದರೆ ಸಂಭಾಷಣೆಯ ಮುಖ್ಯ ಸಾಲುಗಳನ್ನ ಮಾತ್ರ ಸ್ಕ್ರೀನಿನ ಮೇಲೆ ತೋರಿಸಬಹುದು. ಅಡಕವಾಗಿರತ್ವೆ, ಯಾವ ದೊಡ್ಡ ವಿವರಣೆ ನೀಡಬೇಕಾಗಿಲ್ಲ. ಒಂದು ಉದಾಹರಣೆ ಕೊಡಬೇಕಂದ್ರೆ: ಮಗ ಓಡಿ ಬಂದು ಬೋರ್ಡಿನ ಮೇಲೆ ‘ಹೋಮ್ ಟಾಸ್ಕ್ಸ್’ ಅಂತ ಬರೆಯುವುದರಿಂದ ಚಿತ್ರ ಶುರುವಾಗುವುದು. ಅದಾದ ಮೇಲೆ ದಾಪುಗಾಲು ಹಾಕಿಕೊಂಡು ಬಂದ ಅಪ್ಪ ಬೋರ್ಡ್ ಅಳಿಸಿ ಮಿಲಿಟರಿ ಕೆಲಸಗಳ ಪಟ್ಟಿ ಮಾಡುತ್ತಾನೆ, ‘ಪ್ರಿಯಾರಿಟಿ ಆಫ್ ಟಾಸ್ಕ್ಸ್’ ಅಂತ: 1) ಟ್ರೆಂಚುಗಳನ್ನು ಅಗೆಯುವುದು, ಆಯುಧಗಳಿಗೆ ಬೇಕಾಗುವ ಗುಂಡಿಗಳನ್ನು  ತೋಡುವುದು 2) ಮೈನುಫೀಲ್ಡ್ – ಅಂದ್ರೆ ಸಿಡಿಗುಂಡಿಗೆ ಮಾಡುವ ಪ್ರದೇಶ – ತಯಾರು ಮಾಡುವುದು… ಹೀಗೆ ಇತ್ಯಾದಿ ಯುದ್ಧಭೂಮಿಗೆ ಮೀಸಲಾದ ಕೆಲಸಗಳು. ಆಮೇಲೆ ತುಂಬುಬಸುರಿ ಅಮ್ಮ ಓಲಾಡಿಕೊಂಡು ಬಂದು ಮಾವಿನಹಣ್ಣನ್ನು ಪ್ರಿಸರ್ವ್ ಮಾಡೋದಕ್ಕೆ ರೆಸಿಪೀ ಬರೆಯುತ್ತಾಳೆ: 1) ಹಣ್ಣು ಹಣ್ಣಾದ ಮಾವನ್ನು ಹೆಚ್ಚಿಕೊಳ್ಳುವುದು 2) 30 ಗ್ರಾಂ ಸಕ್ಕರೆಯನ್ನು 70 ಗ್ರಾಮ್ ನೀರಿನಲ್ಲಿ ಕದಡುವುದು 3) ಸಕ್ಕರೆ ಪಾಕವಾಗುವ ವರೆಗೂ ಒಲೆಯ ಮೇಲಿಡುವುದು 4) ಹೆಚ್ಚಿದ ಹಣ್ಣನ್ನು ಪಾಕಕ್ಕೆ ಸೇರಿಸುವುದು… ಹೀಗೆ. ಇಲ್ಲಿ ಚಿತ್ರದ ಬಗೆ ಮತ್ತು ಹಿನ್ನಲೆ ಸಂಗೀತ ಬಹಳ ಮುಖ್ಯ: ಪ್ರತಿ ಪಾತ್ರಕ್ಕೂ ಅವರದ್ದೇ ನಿರ್ದಿಷ್ಟ ಚಲನಾಕ್ರಮ, ಸಂಗೀತ. ಮಾರ್ಚ್ ಮಾಡುವ ಸದ್ದಿಗೆ ಅಪ್ಪ ದಾಪುಗಾಲು ಹಾಕುತ್ತಾ ಎಡದಿಂದ ಬೋರ್ಡಿನ ಬಳಿ ಬರುವುದು. ತುಂಬು ಬಸುರಿ ಅಮ್ಮ ಬಲದಿಂದ ಮಧ್ಯಕ್ಕೆ ಒಲಾಡುತ್ತಾ ಬರುವಾಗ ವಾಪಸ್ ಹೋಗುವಾಗ ಸಿತಾರಿನ ಸಂಗೀತ. ಮತ್ತೆ ಕಾರ್ಟೂನಿನ ಸಂಗೀತಕ್ಕೆ ಮಗ ಆಚೆಯಿಂದ ಈಚೆಗೆ ಓಡುವುದು. ಕಾರ್ಟೂನಿನ ಟೋನ್ ವಿಡಂಬನೆಗೂ ಗಾಂಭೀರ್ಯಕ್ಕೂ ಮಧ್ಯ ತೂಗೋದ್ರಿಂದ ಇವೆಲ್ಲವನ್ನೂ ಕಾರ್ಟೂನಿನಲ್ಲಿಯೇ ಮಾಡಿದ್ದು.

ಐಸಂಸ್ಟೈನಿನ ‘ಮಾಂಟೇಜ್’ ಪ್ರಕಾರ ಎರಡು ವಿಭಿನ್ನವಾದ ವಸ್ತುಗಳನ್ನ ಪಕ್ಕ ಪಕ್ಕ ಇಟ್ಟಾಗ ಅದು ಮೂರನೇ ಅರ್ಥವನ್ನ ಮೂಡಿಸತ್ತೆ. ಇಲ್ಲಿ ಯುದ್ಧದ ಹಿನ್ನಲೆಯೊಳಗೆ, ಮನೆಯೊಂದಿಗೆ ಮತ್ತು ಹೆಣ್ಣಿನೊಂದಿಗೇ ಗಂಟು ಹಾಕಿರುವ ರೆಸಿಪೀ ಹೊಸದಾಗಿ ಕಾಣಿಸುತ್ತದೆ. ‘ಹೋಮ್ ಟಾಸ್ಕ್’ ಅನ್ನೋದಕ್ಕೆ ಎರಡೆರಡು ಅರ್ಥಗಳು: ‘ಹೋಮ್ ವರ್ಕ್’ ಸರಿ, ಮನೆಗೆಲಸಗಳೂ ಹೌದು. ಪಾರ್ಥ ಚಾಟರ್ಜೀ ಎಂಬ ಇತಿಹಾಸಕಾರರು ಕೊಲೋನಿಯಲ್ ಸಮಯದಲ್ಲಿ – ಅಂದ್ರೆ ಬ್ರಿಟಿಷರಿದ್ದ ಸಮಯದಲ್ಲಿ – ಭಾರತೀಯ ಸಮಾಜದಲ್ಲಿ ಗಂಡಸರಿನ ಹೆಂಗಸರಿನ ಸ್ಥಾನದ ಬಗ್ಗೆ ಬರೆಯುತ್ತಾ ಹೇಳ್ತಾರೆ ಗಂಡಸರೆಲ್ಲ ಹೊರಗಡೆಯ ಪ್ರಪಂಚದ ನಿರ್ವಹಣೆ ಮಾಡುವುದಾದರೆ, ಮನೆಯ ಪವಿತ್ರತೆಯನ್ನ ಕಾಪಾಡೋದು ಹೆಂಗಸರ ಕರ್ತವ್ಯವಾಗಿತ್ತು ಅಂತ. ನಮ್ಮ ಚಿತ್ರದ ಪಾತ್ರಗಳು ತಮಗೆ ಗೊತ್ತಿಲ್ಲದೆಯೇ ಈ ಜವಾಬ್ದಾರಿಗಳನ್ನು ಪ್ರತಿನಿಧಿಸುತ್ತಾರೆ. ಮತ್ತೆ ಈ ಎಲ್ಲ ಪಾತ್ರಧಾರಿಗಳು ಲಿಸ್ಟಿನಲ್ಲಿ ಬರೆಯುತ್ತಾರಲ್ಲ ಅದು ಬಹಳ ಗಮನ ಸೆಳೆಯುವ ವಿಚಾರ. ಪಟ್ಟಿಯಲ್ಲಿ ವ್ಯವಸ್ಥಿತವಾಗಿ ಒಂದರ ಕೆಳಗೊಂದು ಬರೆಯುವುದು ಜೀವನವನ್ನ ಆಯೋಜಿಸಿಕೊಳ್ಳಲಿರುವ ಒಂದು ಆಧುನಿಕ ಮಾರ್ಗ.

ರಾಜ್ಯಲಕ್ಷ್ಮಿ

ಮತ್ತೆ ‘ಅರ್ಜೆಂಟ್ ಸಾರು’? ಅದರಲ್ಲಿ ಮಾತು ಯಾಕಿಲ್ಲ?

ಪುಷ್ಪಮಾಲಾ

‘ಅರ್ಜೆಂಟ್ ಸಾರು’ ಒಂದು ಕಲಾಪ್ರದರ್ಶನ. ರಂಗಭೂಮಿಯ ನಾಟಕದ ರೀತಿ ಅಲ್ಲ ಅದು; ಅದರದ್ದೇ ಆದ ಮಿನಿಮಲಿಸ್ಟ್ — ಅಂದ್ರೆ ಕನಿಷ್ಠವಾಗಿ ಎಷ್ಟು ಬೇಕೋ ಅಷ್ಟೇ — ರೂಪ ಇರತ್ತೆ: ಸಣ್ಣ ಅವಧಿಯ ಕ್ರಿಯೆಗಳನ್ನೊಳಗೊಂಡ ಸರಳವಾದ ಒಂದು ಸರಣಿ. ಸಾಮಾನ್ಯವಾಗಿ ಮಾಡುವ ಅಡಿಗೆಯ ಕ್ರಿಯೆಯನ್ನಷ್ಟೇ ಬಿಂಬಿಸಬೇಕು ಅನ್ನೋದು ನನ್ನ ಆಸೆ, ಆದ್ರೆ ನನ್ನ ಐಷಾರಾಮಿ ಹಾಗು ಕಿರಿಕಿರಿಮಾಡುವ ಕಾಸ್ಟ್ಯೂಮಿನಲ್ಲಿ ಅದೊಂದು ಆಚರಣೆ ಸಮಾರಂಭದ ಹಾಗೆ ತೋರತ್ತೆ. ಈ ಪ್ರದರ್ಶನದಲ್ಲಿ ವೈಭವಮಯವಾದದ್ದನ್ನು ದೈನಂದಿನವಾದದ್ದನ್ನು ಪಕ್ಕಪಕ್ಕದಲ್ಲೇ ಇಟ್ಟದ್ದು – ಅಂದ್ರೆ ಅತ್ಯುಚ್ಛವಾದ ಸಂಕೇತ ಅಂತಲೇ ನಂಬಲಾಗಿರುವ ಭಾರತಮಾತೆಯಿಂದ ಅಡಿಗೆಮನೆಯ ಕಟ್ಟೆಯ ಮೇಲೆ ಚಿಕ್ಕ-ಚೊಕ್ಕದಾದ ಅಡಿಗೆ ಮಾಡಿಸಿದ್ದು ಬಹಳ ಹಿಡಿಸಿತು ಅಂತ ಒಬ್ಬರು ವೀಕ್ಷಕರು ಹೇಳಿದರು. ಕೆಲವರು ನನ್ನನ್ನ ಯಾಕೆ ಮಾತಾಡಲಿಲ್ಲ ನೀವು ಅಂತ ಕೇಳ್ತಾರೆ, ಯಾರಾರೋ ರಾಜಕಾರಣಿ ಅಂತಹವರ ಜತೆ ಸಂಭಾಷಣೆಯನ್ನ ಕಟ್ಟಬಹುದಿತ್ತಲ್ವಾ ಅಂತ. ಆದ್ರೆ ನನಿಗನ್ನಿಸತ್ತೆ ಅಡಿಗೆಯಂತಹ ಸಾಮಾನ್ಯ ಕ್ರಿಯೆಯನ್ನ ಅದು ಆದ ಹಾಗೆಯೇ ಸುಮ್ಮನೆ ನೋಡುವುದರಲ್ಲಿರುವ ನಿಧಾನತೆ ಮತ್ತು ಅದರ ಸಣ್ಣ ಪುಟ್ಟ ಸೂಕ್ಷ್ಮಗಳನ್ನೆಲ್ಲ ಗಮನಿಸುವುದರಲ್ಲಿರುವ ಮಗ್ನತೆ ನಮ್ಮನ್ನ ಧ್ಯಾನಾವಸ್ಥೆಗೆ ಕರೆದೊಯ್ಯತ್ತೆ ಅಂತ – ನಮ್ಮನ್ನ ಚಿಂತನಾಶೀಲರನ್ನಾಗಿ ಮಾಡತ್ತೆ. ಇದರಲ್ಲಿ ಜಾಸ್ತಿ ವಿವರಗಳನ್ನ ಕೊಡೋದು ನನಗೆ ಇಷ್ಟವಿರಲಿಲ್ಲ. ಅಮೇರಿಕದಲ್ಲಿನ ಇನ್ನೊಬ್ಬರ ಗೆಳೆಯರು ಇದನ್ನ ನೋಡಿ ಬಹಳ ಮನೋಹರವಾಗಿಯೂ ಪರಿಣಾಮ ಬೀರುವ ಹಾಗೆಯೂ ಇತ್ತು ಅಂದರು. ಮತ್ತೆ ಗೌರಿಯ ಭೀಕರ ಕತೆಯ ಬಗ್ಗೆ ಏನು ಗೊತ್ತೇ ಇರಲಿಲ್ಲ ಅಂತ ಬೇಸರ ಪಟ್ಟುಕೊಂಡರು. ಅಂದ್ರೆ, ಈ ಪ್ರಸ್ತುತಿ ಗೌರಿಯ ಕತೆಯ ಬಗ್ಗೆ ಮಾನವೀಯವಾಗಿ, ಪರೋಕ್ಷವಾಗಿ ಪುನರಾಸಕ್ತಿಯನ್ನ ಕೂಡ ಮೂಡಿಸತ್ತೆ ಅಂತ ಅಂದುಕೋಂಡಿದ್ದೀನಿ.

ರಾಜ್ಯಲಕ್ಷ್ಮಿ

ನಿಮ್ಮ ಕಲೆಯೆಲ್ಲವೂ ಗಹನವಾಗಿದ್ದರೂ ಎಷ್ಟು ಹಾಸ್ಯಮಯವಾಗಿರುತ್ತವಲ್ಲ. ಹೇಳಿ, ನೀವು ಹಾಸ್ಯವನ್ನ ಹೇಗೆ ಉಪಯೋಗಿಸುತ್ತೀರಿ?

ಪುಷ್ಪಮಾಲಾ

ನಾನು ದಶಕಗಳ ನಂತರ ಮತ್ತೆ ಆರ್ಥರ್ ಕೋಸ್ಟ್ಲರಿನ ‘ಆಕ್ಟ್ ಆಫ್ ಕ್ರಿಯೇಷನ್’ ಪುಸ್ತಕವನ್ನ ಓದುತ್ತಿದ್ದೆ. 70ರ ಪ್ರಭಾವಿ ಚಿಂತಕರು ಅವರು, ಈಗ ಮರೆತುಬಿಟ್ಟಿದ್ದೀವಿ. ನನ್ನ ಪ್ರಾರಂಭದ ದಿನಗಳಲ್ಲಿ ಇದು ನನಗೆ ತುಂಬ ಮುಖ್ಯವಾದ ಪುಸ್ತಕವಾಗಿತ್ತು. ಅದರಲ್ಲಿ ಕಲೆ, ವಿಜ್ಞಾನ, ಮತ್ತು ಹಾಸ್ಯಕ್ಕೆ ಹೇಗೊಂದು ನಿಕಟವಾದ ಸಂಬಂಧವಿದೆ, ಹೇಗೆ ಮೂರರಲ್ಲೂ ಅನಿರೀಕ್ಷಿತ ಸಂಯೋಜನೆಗಳ ಮೂಲಕ ಹೊಸ ಒಳನೋಟಗಳಿಗೆ ಹೊಸ ಆವಿಷ್ಕಾರಗಳಿಗೆ ತಲುಪುತ್ತೀವಿ ಅಂತ ಬರೀತಾರೆ. ನನಗೆ ಹಲವಾರು ಸ್ಥಾಯಿಗಳಲ್ಲಿ ಒಮ್ಮೆಲೇ ಕೆಲಸ ಮಾಡೋದು ಇಷ್ಟ. ನಾನು ಉಪಯೋಗಿಸುವ ಭಾಷೆ ಒಂದು ರೀತಿಯ ಸ್ಲಾಂಗ್ — ಅದನ್ನ ಆಡುಭಾಷೆ ಅನ್ನಬಹುದು, ಆದ್ರೆ ನಿಜವಾಗಿಯು ಅದು ಅಶಿಷ್ಟವಾದ ಭಾಷೆ. ಹಾಸ್ಯ ಆಶ್ಚರ್ಯವನ್ನ ಮೂಡಿಸಿ, ಮನೋರಂಜನೆಯನ್ನ ನೀಡಿ, ವೀಕ್ಷಕರನ್ನ ಒಳಗೆ ಸೆಳೆಯತ್ತೆ. ಸ್ಟೀರಿಯೋಟೈಪುಗಳ ನಿಷ್ಠೂರತೆಯನ್ನ ಕೆಡವತ್ತೆ. ವಿನೋದ, ಚುರುಕುತನ, ವಿಡಂಬನೆ, ಶ್ಲೋಷೋಕ್ತಿಗಳು, ಪ್ರಹಸನ, ಅಸಂಬದ್ಧ – ಇವೆಲ್ಲವನ್ನ ಕೀಳು ಮಾಧ್ಯಮಗಳನ್ನಾಗಿ ನೋಡ್ತೀವಿ; ಒಳ್ಳೆಯ ಕಲೆ ಅಂದ್ರೆ ಗಂಭೀರ ಅಂತಂದುಕೊಳ್ತೀವಿ. ಮತ್ತೆ ಹೆಂಗಸರಂತು ನಗುವ ಹಾಗೇ ಇಲ್ಲ: ನಗುವ ಹೆಣ್ಣು ಅಸೌಮ್ಯ, ಮೇಲೆ ಬೀಳ್ತಾಳೆ, ಹೀಗೆ. ಆದ್ರೆ ನಂಗೆ ಮಾತ್ರ ಹಾಸ್ಯವನ್ನ ಉಪಯೋಗಿಸೋದೇ ಇಷ್ಟ: ಅದು ವಿಮರ್ಶೆಗಾಗಲಿ, ಕ್ರಾಂತಿಗಾಗಲಿ, ನಮ್ಮ ಭಾವನೆಗಳ ಬಿಡಿಗಡೆಗಾಗಲಿ. ಒಂದು ಮೆಸೇಜಿನಲ್ಲಿನ ಮಸಾಜೇ ಹಾಸ್ಯ.

ಪರಿಚಯ

ಎನ್. ರಾಜ್ಯಲಕ್ಷ್ಮಿ ಇವರು ಭಾರತದ ಪ್ರಖ್ಯಾತ ಸಾಂಸ್ಕೃತಿಕ ಚಿಂತಕರು, ಕಲಾ ವಿಮರ್ಶಕರು. ಬೆಂಗಳೂರಿನ ‘ಐಡಿಯಲ್ ಟೈಮ್ಸ್’ನಲ್ಲಿ ಪತ್ರಕರ್ತರಾಗಿ ಪ್ರಾರಂಭಿಸಿ, ಒಡನೆಯೇ ಜನಪ್ರಿಯ ಕಲಾ ವಿಮರ್ಷಕರಾಗಿ, ಮುಖ್ಯವಾದ ಸಾಂಸ್ಕೃತಿಕ ಚಿಂತಕರಾಗಿ ಬೆಳೆದರು. ಪುಷ್ಪಮಾಲಾರವರ ಕಲೆಯ ಬಗ್ಗೆ ಇವರು ಪ್ರಮುಖವಾದ ಪರಿಣಿತಿಯನ್ನು ಹೊಂದಿದ್ದಾರೆ.

ಪುಷ್ಪಮಾಲಾ ಎನ್. ಇವರು ಬಹುಮುಖ ಪ್ರತಿಭೆ: ಫೋಟೋ, ವೀಡಿಯೋ, ಮತ್ತು ಪ್ರದರ್ಶನ ಕಲಾವಿದೆ, ಶಿಲ್ಪಿ, ಬರಹಗಾರರು, ಹಾಗು ಕ್ಯುರೇಟರ್. ಸ್ತ್ರೀಪ್ರಾಧಾನ್ಯವೂ ಕ್ರಾಂತಿಕಾರಿಯೂ ಆದ ಇವರ ಚುರುಕಾದ ವಿನೋದಮಯ ಕಲೆಯು ಸಮಾಜದ ಯಥಾಸ್ತಿಥಿಗಳನ್ನು ಪ್ರಶ್ನಿಸುತ್ತವೆ. ಇವರದ್ದು ಬೆಂಗಳೂರಿನಲ್ಲಿ ವಾಸ ಮತ್ತು ಕೆಲಸ.

1 Comment

  1. Hi, yes this piece of writing is truly fastidious and I have learned lot of things from it regarding blogging.
    thanks.

Leave a Reply

Your email address will not be published. Required fields are marked *

oneating-border
Scroll to Top
  • The views expressed through this site are those of the individual authors writing in their individual capacities only and not those of the owners and/or editors of this website. All liability with respect to actions taken or not taken based on the contents of this site are hereby expressly disclaimed. The content on this posting is provided “as is”; no representations are made that the content is error-free.

    The visitor/reader/contributor of this website acknowledges and agrees that when he/she reads or posts content on this website or views content provided by others, they are doing so at their own discretion and risk, including any reliance on the accuracy or completeness of that content. The visitor/contributor further acknowledges and agrees that the views expressed by them in their content do not necessarily reflect the views of oneating.in, and we do not support or endorse any user content. The visitor/contributor acknowledges that oneating.in has no obligation to pre-screen, monitor, review, or edit any content posted by the visitor/contributor and other users of this Site.

    No content/artwork/image used in this site may be reproduced in any form without obtaining explicit prior permission from the owners of oneating.in.